
ಕೋವಿಡ್-19 ಲಾಕ್‌ಡೌನ್ ಅವಧಿಯಲ್ಲಿ ಇಡೀ ಜಗತ್ತೇ ಒಂದು ರೀತಿಯ ಸಂಕಷ್ಟದಲ್ಲಿರುವಾಗ, ಜೀವನದ ಚಕ್ರವನ್ನು ತಳ್ಳಲು ತ್ರಾಸ ಪಡುತ್ತಿರುವ ಅನೇಕರ ಪರಿಸ್ಥಿತಿಗಳನ್ನು ಹೈಲೈಟ್ ಮಾಡಿದ ಸಾಮಾಜಿಕ ಜಾಲತಾಣಗಳು ಅವರಿಗಾಗಿ ಇಡೀ ಸಮುದಾಯಗಳೇ ಮಿಡಿಯುವಂತೆ ಮಾಡುತ್ತಿವೆ.
ದೆಹಲಿಯ ಮಾಳವಿಯಾ ನಗರದ ಬಾಬಾ ಕಾ ಢಾಬಾದ ಹಿರಿಯ ದಂಪತಿಗಳ ಸಂಕಷ್ಟದ ಸ್ಥಿತಿಗೆ ಇಡೀ ದೇಶದ ಜನತೆ ಮಿಡಿದ ಹೃದಯಸ್ಪರ್ಶಿ ಘಟನೆಯ ನೆನಪು ಇನ್ನೂ ಹಸಿರಾಗಿರುವಂತೆ ಇದೇ ರೀತಿಯ ಇನ್ನಷ್ಟು ಘಟನೆಗಳು ಮುನ್ನೆಲೆಗೆ ಬರುತ್ತಿವೆ.
ಮುಂಬೈಯಲ್ಲಿ ವಾಸಿಸುತ್ತಿರುವ ಎಂಬಿಎ ಪದವೀಧರ ದಂಪತಿಯಾದ ಅಶ್ವಿನಿ ಶೆಣೈ ಶಾ ಹಾಗೂ ಅಕೆಯ ಪತಿ ಅಂಕುಶ್ ನೀಲೇಶ್ ಶಾ, ತಮ್ಮ ಮನೆ ಕೆಲಸದಾಕೆಗೆ ನೆರವಿಗೆ ಬಂದಿದ್ದಾರೆ. 55 ವರ್ಷದ ಈ ಕೆಲಸದಾಕೆಯ ಪತಿಗೆ ಪಾರ್ಶ್ವವಾಯು ಬಾಧಿಸುತ್ತಿದ್ದು, ಆಕೆಗೆ ಆರ್ಥಿಕವಾಗಿ ನೆರವಾಗಲೆಂದು ಅಶ್ವಿನಿ-ನೀಲೇಶ್ ದಂಪತಿ ಖಾಂಡಿವಲಿ ರೈಲ್ವೇ ನಿಲ್ದಾಣದ ಹೊರಗೆ ಸ್ಟಾಲ್ ಒಂದನ್ನು ಇಟ್ಟುಕೊಟ್ಟು, ತಮ್ಮ ಮನೆಯ ಕೆಲಸದಾಕೆ ಮಾಡಿಕೊಟ್ಟ ಪೋಹಾ, ಇಡ್ಲಿ, ಪರಾಠಾ ಮಾರಾಟ ಮಾಡುವ ಮೂಲಕ ಕಳೆದ ವರ್ಷದ ಅಕ್ಟೋಬರ್‌ನಲ್ಲಿ ಸಾಮಾಜಿಕ ಜಾಲತಾಣದಲ್ಲಿ ಸೆನ್ಸೇಷನ್ ಸೃಷ್ಟಿಸಿದ್ರು.
ಡಿಸೆಂಬರ್ 2019ರಲ್ಲಿ ಅನ್ನಪೂರ್ಣ ಪರಾಠಾ ಸ್ಟಾಲ್ ಹಾಕಿಕೊಟ್ಟ ಈ ದಂಪತಿ ಮಹಿಳೆಯರ ಸಬಲೀಕರಣದ ಗುರಿಯಿಂದ ಪುಟ್ಟದೊಂದು ಸಹಕಾರೀ ವಹಿವಾಟನ್ನು ಹಾಕಿಕೊಟ್ಟಿದ್ದು, ಮೂವರು ಮಹಿಳೆಯರಿಗೆ ಜೀವನಾಧಾರ ಸೃಷ್ಟಿಸಿಕೊಟ್ಟಿದ್ದಾರೆ.
ಸಾಂಕ್ರಮಿಕದ ಅವಧಿಯಲ್ಲಿ ವಹಿವಾಟು ಕುಂಠಿತಗೊಂಡ ಅವಧಿಯಲ್ಲಿ ಈ ಮಹಿಳೆಯರ ನೆರವಿಗೆ ನಿಂತ ಈ ಹೃದಯವಂತ ದಂಪತಿ, ಮುಂಬಯಿಯಾದ್ಯಂತ ಇರುವ 32+ ಮಹಿಳೆಯರೊಂದಿಗೆ ಕೂಡಿಕೊಂಡು ಪಾರ್ಟಿ ಹಾಗೂ ಕಾರ್ಪೋರೇಟ್ ಆರ್ಡರ್‌ಗಳನ್ನು ಪಡೆದುಕೊಂಡು,ಜೊತೆಗೆ ವಲಸೆ ಕಾರ್ಮಿಕರಿಗೆ 80,000 ಆಹಾರ ಪೊಟ್ಟಣಗಳನ್ನು ವಿತರಣೆ ಮಾಡಲು ನೆರವಾಗಿದ್ದಾರೆ.
