ವನ್ಯಜೀವಿ ಮತ್ತು ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಪ್ರಾಣಿ ಸಂರಕ್ಷಣೆಗಾಗಿ ಶ್ರಮಿಸುತ್ತಿದ್ದ ಅರಣ್ಯಾಧಿಕಾರಿಗಳಿಗೆ ಈ ಸುದ್ದಿ ಖುಷಿ ತಂದಿದೆ. ತೆಲಂಗಾಣದ ಭೂಪಾಲಪಲ್ಲಿ ಪ್ರದೇಶದಲ್ಲಿ ಆ.29 ರ ಶನಿವಾರ ಹೆಣ್ಣುಹುಲಿಯೊಂದರ ಹೆಜ್ಜೆ ಗುರುತು ಪತ್ತೆಯಾಗಿದ್ದು, ಈ ಪ್ರದೇಶದಲ್ಲಿ 17 ವರ್ಷಗಳ ನಂತರ ಹೆಣ್ಣುಹುಲಿಯ ಹೆಜ್ಜೆ ಗುರುತು ಪತ್ತೆಯಾಗಿರುವುದು ಅರಣ್ಯಾಧಿಕಾರಿಗಳಲ್ಲಿ ಖುಷಿ ತಂದಿದೆ.
ಇದಾದ ಎರಡೇ ದಿನದಲ್ಲಿ ಮತ್ತೊಂದು ಹೆಣ್ಣುಹುಲಿಯ ಪಂಜದ ಗುರುತು ಸಿಕ್ಕಿದ್ದು, ಇದರ ಬೆನ್ನಲ್ಲೇ ಹೆಣ್ಣುಹುಲಿಗಳ ಪತ್ತೆಗಾಗಿ ಅರಣ್ಯಾಧಿಕಾರಿಗಳು ಮುಂದಾಗಿದ್ದಾರೆ. ಹುಲಿಯ ಹೆಜ್ಜೆ ಗುರುತು ಅನುಸರಿಸಿ ಅಲ್ಲಲ್ಲಿ ಕ್ಯಾಮರಾಗಳನ್ನು ಅಳವಡಿಸಿದ್ದು, 30 ಕಿ.ಮೀ. ದೂರದ ಅಜಮ್ ನಗರ ಗ್ರಾಮೀಣ ಪ್ರದೇಶದಲ್ಲಿ ಹುಲಿ ಕಾಣಿಸಿಕೊಂಡಿದೆ.
ಅದರ ಚಲನವಲನದ ಮೇಲೆ ನಿಗಾ ಇಟ್ಟಿದ್ದು, ಹೊಸ ಆವಾಸಸ್ಥಾನ ಅಥವಾ ಆಹಾರ ಅರಸಿ ಹೋಗುತ್ತಿರಬಹುದು ಎಂದು ಜಿಲ್ಲಾ ಅರಣ್ಯಾಧಿಕಾರಿ ಕೆ.ಪುರುಷೋತ್ತಮ್ ತಿಳಿಸಿದ್ದಾರೆ. ಈ ಹೆಣ್ಣು ಹುಲಿಗಳು ಬಹುತೇಕ ಇಲ್ಲಿಯವಲ್ಲ. ಛತ್ತೀಸ್ ಗಢದ ಇಂದ್ರಾವತಿ ಹುಲಿ ಸಂರಕ್ಷಿತ ಪ್ರದೇಶ ಅಥವಾ ಮಹಾರಾಷ್ಟ್ರದ ತಡೋಬಾ ಹುಲಿ ಸಂರಕ್ಷಿತ ಪ್ರದೇಶದಿಂದ ವಲಸೆ ಬಂದಿರಬಹುದು ಎಂದು ಅಂದಾಜಿಸಲಾಗಿದೆ.