ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸಿಂಘು ಗಡಿಯಲ್ಲಿ ಪ್ರತಿಭಟಿಸುತ್ತಿರುವ ರೈತರಿಗೆ ಹಂತ-ಹಂತವಾಗಿ ಉಚಿತ ವೈಫೈ ಹಾಟ್ ಸ್ಪಾಟ್ ನೀಡಲು ಆಮ್ ಆದ್ಮಿ ಪಕ್ಷದ ಸರ್ಕಾರ ನಿರ್ಧರಿಸಿದೆ.
ಪಕ್ಷದ ಶಾಸಕ ರಾಘವ್ ಚಾಂದಾ ಈ ವಿಚಾರ ತಿಳಿಸಿದ್ದು, ಕಳೆದ ಒಂದು ತಿಂಗಳಿನಿಂದ ರೈತರು ಹೋರಾಟ ನಡೆಸುತ್ತಿದ್ದಾರೆ. ಕುಟುಂಬದವರ ಸಂಪರ್ಕ ಕಡಿತಗೊಂಡು ಹಲವು ದಿನಗಳಾಗಿವೆ. ದುರ್ಬಲ ನೆಟ್ ವರ್ಕ್ ನಿಂದಾಗಿ ದೂರವಾಣಿ ಮೂಲಕವೂ ಮಾತನಾಡಲಾಗುತ್ತಿಲ್ಲ. ಹೀಗಾಗಿ ಸಿಂಘು ಗಡಿ ಭಾಗದಲ್ಲಿ ಪ್ರತಿಭಟನೆ ಕುಳಿತಿರುವ ರೈತರಿಗೆ ಉಚಿತ ವೈಫೈ ಸಂಪರ್ಕ ನೀಡಲಾಗುವುದು ಎಂದರು.
ಸಿಂಘು ಗಡಿ ಭಾಗದ 31 ಸಾವಿರ ಚದರ ಮೀಟರ್ ನಲ್ಲಿ ಪ್ರತಿಭಟನೆ ನಡೆಯುತ್ತಿದ್ದು, ಪ್ರತಿ 100 ಮೀಟರ್ ಒಳಗೊಳ್ಳುವಂತೆ ವೈಫೈ ಹಾಕಿಸಿಕೊಡಲಾಗುತ್ತದೆ.
ತಮ್ಮ ನೋವು ಹಂಚಿಕೊಳ್ಳಲು ಗಡಿ ಭಾಗಕ್ಕೆ ಬಂದಿರುವ ರೈತರು ಶೀತಗಾಳಿಯಿಂದ ತೀವ್ರ ಚಳಿ ಕೂಡ ಅನುಭವಿಸುತ್ತಿದ್ದಾರೆ. ಅನೇಕರು ಹಿರಿಯರಿದ್ದಾರೆ. ಕುಟುಂಬದವರಲ್ಲಿ ಸಹಜವಾಗಿ ಆತಂಕ ಇದೆ. ಇದನ್ನು ದೂರ ಮಾಡುವ ಮೂಲಕ ಕೊಂಚ ನೆಮ್ಮದಿ ನೀಡಲು ವೈಫೈ ವ್ಯವಸ್ಥೆ ಮಾಡಲಾಗುತ್ತಿದೆ ಎಂದರು.