ಕೊರೊನಾ ಲಸಿಕೆ ಹೆಸರಿನಲ್ಲಿ ಸೈಬರ್ ಅಪರಾಧಗಳು ಹೆಚ್ಚಾಗ್ತಿದೆ. ಸೈಬರ್ ಅಪರಾಧಿಗಳ ಟಾರ್ಗೆಟ್ ವೃದ್ಧರು. ಮೊಬೈಲ್ ಸ್ನೇಹಿಯಲ್ಲದ, ಏಕಾಂಗಿಯಾಗಿ ವಾಸಿಸುವ ವೃದ್ಧರನ್ನು ಸೈಬರ್ ಅಪರಾಧಿಗಳು ಸುಲಭವಾಗಿ ಬಲೆಗೆ ಬೀಳಿಸಿಕೊಳ್ತಿದ್ದಾರೆ. ಲಸಿಕೆಯ ಹೆಸರಿನಲ್ಲಿ ಎಲ್ಲಾ ವಿವರಗಳನ್ನು ಪಡೆದು ಮೋಸ ಮಾಡ್ತಿದ್ದಾರೆ.
ದೆಹಲಿ-ಎನ್‌ಸಿಆರ್ ಸೇರಿದಂತೆ ಮುಂಬೈ, ಬೆಂಗಳೂರು, ಕೋಲ್ಕತಾದಲ್ಲಿ ಇಂತಹ ಪ್ರಕರಣಗಳು ಬೆಳಕಿಗೆ ಬರ್ತಿದೆ. ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. 60 ವರ್ಷಕ್ಕಿಂತ ಮೇಲ್ಪಟ್ಟ ಜನರಿಗೆ ಕೊರೊನಾ ಲಸಿಕೆ ಹಾಕಲಾಗ್ತಿದೆ. ಇದನ್ನು ಕೇಂದ್ರ ಸರ್ಕಾರ ಘೋಷಣೆ ಮಾಡ್ತಿದ್ದಂತೆ ಹಿರಿಯ ನಾಗರಿಕರ ಡೇಟಾಕ್ಕೆ ಹೆಚ್ಚಿನ ಬೇಡಿಕೆ ಬಂದಿದೆ. ಕಂಪನಿಗಳಿಂದ ಡೇಟಾ ಖರೀದಿಸುವ ಸೈಬರ್ ಅಪರಾಧಿಗಳು ವೃದ್ಧರನ್ನು ಟಾರ್ಗೆಟ್ ಮಾಡುತ್ತಿವೆ.
ಕಂಪನಿ ನೀಡಿದ ಡೇಟಾ ಆಧಾರದ ಮೇಲೆ ವೃದ್ಧರಿಗೆ ಕರೆ ಮಾಡುವ ಸೈಬರ್ ಅಪರಾಧಿಗಳು ಡ್ರಗ್ ಕಂಟ್ರೋಲರ್ ಜನರಲ್ ಕಚೇರಿಯಿಂದ ಕರೆ ಮಾಡುತ್ತಿರುವುದಾಗಿ ನಂಬಿಸುತ್ತಾರೆ. ಲಸಿಕೆ ಹಾಕಿಸಿಕೊಳ್ಳುವ ಪಟ್ಟಿಯಲ್ಲಿ ನಿಮ್ಮ ಹೆಸರಿದೆ. ಹಾಗಾಗಿ ಆಧಾರ್ ಕಾರ್ಡ್ ಫೋಟೋ ಕಳುಹಿಸುವಂತೆ ಹೇಳಲಾಗುತ್ತದೆ. ಅನೇಕ ಮಾಹಿತಿಯನ್ನು ಸರಿಯಾಗಿ ನೀಡಿರುವ ಕಾರಣ ವೃದ್ಧರು ಆಧಾರ್ ಫೋಟೋ ಕಳುಹಿಸುತ್ತಾರೆ. ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಆಗಿರುವ ಕಾರಣ ಕೆಲ ಸಾಫ್ಟ್ ವೇರ್ ಬಳಸಿ ಸೈಬರ್ ಅಪರಾಧಿಕಗಳು ಖಾತೆ ಖಾಲಿ ಮಾಡುತ್ತಾರೆ. ಬ್ಯಾಂಕ್ ಕೇಳುವ ಒಟಿಪಿಯನ್ನು ವೆರಿಫಿಕೇಷನ್ ಕೋಡ್ ಎಂದು ವೃದ್ಧರನ್ನು ನಂಬಿಸಿ ಒಟಿಪಿ ಪಡೆಯುತ್ತಾರೆ.
ಅನೇಕ ಕಡೆ ಪ್ರಕರಣ ವರದಿಯಾಗ್ತಿದ್ದಂತೆ ಪೊಲೀಸರು ಜನರಿಗೆ ಎಚ್ಚರಿಕೆ ನೀಡ್ತಿದ್ದಾರೆ. ಯಾವುದೇ ಮಾಹಿತಿಯನ್ನು ಫೋನ್ ನಲ್ಲಿ ನೀಡಬೇಡಿ. ಲಸಿಕೆಗೆ ಸಂಬಂಧಿಸಿದ ಯಾವುದೇ ಲಿಂಕ್ ಓಪನ್ ಮಾಡಬೇಡಿ ಎಂದು ಮನವಿ ಮಾಡುತ್ತಿದ್ದಾರೆ.