ಹೈದ್ರಾಬಾದ್: ಹೊರ ರಾಜ್ಯವನ್ನೇ ನೋಡದ ತೆಲಂಗಾಣದ ಗ್ರಾಮಗಳ ಆರ್ಥಿಕವಾಗಿ ಹಿಂದುಳಿದ ಹೆಣ್ಣು ಮಕ್ಕಳು ಈಗ ವಿದೇಶಕ್ಕೆ ತೆರಳಿ ಓದುವ ಅವಕಾಶ ಪಡೆದಿದ್ದಾರೆ. ತೆಲಂಗಾಣ ಸೋಶಿಯಲ್ ವೆಲ್ಫೇರ್ ರೆಸಿಡೆಂಟಲ್ ಎಜುಕೇಶನಲ್ ಇನ್ಸ್ಟಿಟ್ಯೂಟ್ (ಟಿಎಸ್ ಡಬ್ಲ್ಯುಆರ್ ಇಐಎಸ್) ನ ನಾಲ್ವರು ತಮ್ಮ ಓದಿನ ಕನಸು ನನಸು ಮಾಡಿಕೊಳ್ಳಲು ಆಸ್ಟ್ರೇಲಿಯಾಕ್ಕೆ ತೆರಳಲಿದ್ದಾರೆ.
ದ್ವಿತೀಯ ಪಿಯುಸಿ (ಇಂಟರ್ ಮೀಡಿಯೇಟ್)ನಲ್ಲಿ ಎಲ್ಲರೂ ಉತ್ತಮ ಫಲಿತಾಂಶ ಪಡೆದಿದ್ದು, ಈಗ ಅರ್ಥಶಾಸ್ತ್ರಜ್ಞರಾಗುವ ಕನಸಿನೊಂದಿಗೆ ಬ್ಯಾಚುಲರ್ ಆಫ್ ಬಿಜಿನೆಸ್ ಕಲಿಯಲು ಯುನಿವರ್ಸಿಟಿ ಆಫ್ ವಲೊಂಗಾಂಗ್ ಅಥವಾ ಯುನಿವರ್ಸಿಟಿ ಆಫ್ ನ್ಯೂ ಕಾಸ್ಟ್ಲೆಗೆ ತೆರಳಲಿದ್ದಾರೆ.
ಟಿಎಸ್ ಡಬ್ಲ್ಯುಆರ್ ಇಐಎಸ್ ನ 36 ವರ್ಷದ ಇತಿಹಾಸದಲ್ಲಿ ಮೊದಲ ಬಾರಿಗೆ ವಿದ್ಯಾರ್ಥಿನಿಯರು ಪದವಿ ಓದಲು ಫಾರಿನ್ ಗೆ ತೆರಳುತ್ತಿದ್ದಾರೆ. ಜಿ. ಚಂದನಾ, ಜಿ. ಮನೋಗ್ನಾ, ಎಸ್. ಕೃಷ್ಣವೇಣಿ ಮತ್ತು ಕೆ. ಸಂಕೀರ್ತನಾ ಎಂಬ ಹೆಣ್ಣು ಮಕ್ಕಳು ಎಕ್ಸೆಲ್ ಹಾಗೂ ಇನ್ನೂ ಎರಡು ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿದ್ದು, ಈಗ ಇಂಟರ್ ನ್ಯಾಷನಲ್ ಇಂಗ್ಲಿಷ್ ಲ್ಯಾಂಗ್ವೇಜ್ ಟೆಸ್ಟಿಂಗ್ ಸಿಸ್ಟಂ ಕೊನೆಯ ಚರಣದ ಪರೀಕ್ಷೆ ಉತ್ತೀರ್ಣರಾಗಲು ತಯಾರಿ ನಡೆಸಿದ್ದಾರೆ.
“ನಾನು ಈ ಹಂತಕ್ಕೆ ತಲುಪುತ್ತೇನೆ ಎಂದುಕೊಂಡಿರಲಿಲ್ಲ. ಎಲ್ಲವೂ ಪಾಲಕರ ಹಾಗೂ ಶಿಕ್ಷಕರ ಬೆಂಬಲ ಹಾಗೂ ಪ್ರೋತ್ಸಾಹದಿಂದ ಸಾಧ್ಯವಾಯಿತು” ಎಂದು ಚಂದನಾ ಹೇಳಿಕೊಂಡಿದ್ದಾರೆ.
ವಾರಂಗಲ್ ನಲ್ಲಿ ಜಿಮ್ ಕೋಚ್ ಒಬ್ಬರ ಮಗಳಾಗಿರುವ ಚಂದನಾ ಹಾಗೂ ಇತರ ಮೂರು ಹೆಣ್ಣು ಮಕ್ಕಳು ಗಣಿತ, ಅರ್ಥ ಶಾಸ್ತ್ರ ಹಾಗೂ ವಾಣಿಜ್ಯಶಾಸ್ತ್ರ (ಎಂಇಸಿ) ವಿಷಯಗಳೊಂದಿಗೆ ಇಂಟರ್ ಮೀಡಿಯೆಟ್ ಅನ್ನು ಹೈದ್ರಾಬಾದ್ ಗೌಳಿ ದೊಡ್ಡಿಯ ಸೋಶಿಯಲ್ ವೆಲ್ಫೇರ್ ಜೂನಿಯರ್ ಕಾಲೇಜ್ ನಲ್ಲಿ ಕಲಿತಿದ್ದಾರೆ.
ಮನೋಗ್ನಾ ಮಂಚೇರಿಯಲ್ ಜಿಲ್ಲೆಯ ಪತ್ರಿಕೆಯೊಂದರ ವರದಿಗಾರರೊಬ್ಬರ ಮಗಳು. ಆಕೆಯ ತಾಯಿ ಅಂಗನವಾಡಿ ಶಿಕ್ಷಕಿಯಾಗಿದ್ದಾರೆ. ಸಂಕೀರ್ತನಾ ಕರೀಂ ನಗರ ಜಿಲ್ಲೆಯ ರೈತನ ಮಗಳು.
ಕೃಷ್ಣವೇಣಿ ಹೈದ್ರಾಬಾದ್ ನ ವ್ಯಾನ್ ಚಾಲಕನ ಮಗಳು. ಈ ಮೂರೂ ಹೆಣ್ಣು ಮಕ್ಕಳು ಪರಿಶಿಷ್ಟ ಜಾತಿಗೆ ಸೇರಿದ್ದು, ನಾಲ್ಕನೆಯವಳು ಪರಿಶಿಷ್ಟ ಪಂಗಡಕ್ಕೆ ಸೇರಿದ ವಿದ್ಯಾರ್ಥಿನಿಯಾಗಿದ್ದಾಳೆ. ಹೆಣ್ಣು ಮಕ್ಕಳು ಈ ಹಂತಕ್ಕೆ ತಲುಪಲು ಕಠಿಣ ಪರಿಶ್ರಮ ಮಾಡಿದ್ದಾರೆ.
1 ಸಾವಿರಕ್ಕೆ 961 ಅಂಕ ಪಡೆಯುವುದರೊಂದಿಗೆ ವಿದೇಶಿ ಉನ್ನತ ವ್ಯಾಸಂಗಕ್ಕೆ ಆಯ್ಕೆಯಾದ ಚಂದನಾ, ನಾನು ಬಿಕಾಂ ಪದವಿಯನ್ನು ಹಣಕಾಸು ಮೇಜರ್ ವಿಷಯದೊಂದಿಗೆ ಪಡೆಯಲಿಚ್ಛಿಸುತ್ತೇನೆ ಎಂದಿದ್ದಾರೆ. ಆಕೆ ಈಗ ಅಂತಾರಾಷ್ಟ್ರೀಯ ಸ್ಕಾಲರ್ ಶಿಪ್ ಪಡೆಯಲು ಐಇಎಲ್ ಟಿಎಸ್ ಪರೀಕ್ಷೆಯ ಅಂಕವನ್ನು ಎದುರು ನೋಡುತ್ತಿದ್ದಾಳೆ. ಆಕೆಯ ಅಣ್ಣ ಒಬ್ಬ ವಿಕಲಚೇತನನಾಗಿದ್ದು, ಹಾಸಿಗೆಯಲ್ಲೇ ಇರುವ ಪರಿಸ್ಥಿತಿ ಇದೆ. ಚಂದನಾ ಮನೆಯ ಆರ್ಥಿಕ ಪರಿಸ್ಥಿತಿ ಗಂಭೀರವಾಗಿದೆ.
“ಸಂಸ್ಥೆಯ ಹಳೆಯ ವಿದ್ಯಾರ್ಥಿಯೊಬ್ಬರು ಆಸ್ಟ್ರೇಲಿಯಾದಲ್ಲಿದ್ದು, ಪ್ರತಿಭಾವಂತ ವಿದ್ಯಾರ್ಥಿಗಳನ್ನು ಕಲಿಯಲು ಕಳಿಸುವಂತೆ ಆಗ್ರಹಿಸಿದ್ದರು. ಅದರಂತೆ ನಾವು ವಿದ್ಯಾರ್ಥಿಗಳಿಂದ ಪರೀಕ್ಷೆ ಬರೆಸಿದೆವು. ಒಬ್ಬ ವಿದ್ಯಾರ್ಥಿ ಮೂರು ವರ್ಷ ಪದವಿ ಮುಗಿಸಲು 55 ಲಕ್ಷ ರೂ. ಖರ್ಚು ಬರುತ್ತದೆ. ಸರ್ಕಾರ ಸ್ನಾತಕೋತ್ತರ ಪದವಿಗೆ ಮಾತ್ರ ಸ್ಕಾಲರ್ ಶಿಪ್ ನೀಡುತ್ತದೆ. ಇದರಿಂದ ಸ್ಪಾನ್ಸರ್ ಗಳನ್ನು ಹುಡುಕಲಾಗುತ್ತಿದೆ” ಎಂದು ಪ್ರಾಂಶುಪಾಲೆ ಶಾರದಾ ತಿಳಿಸಿದ್ದಾರೆ.