ನವದೆಹಲಿ: ಐವರಲ್ಲಿ ನಾಲ್ಕು ಮಂದಿ ಭಾರತೀಯರು ಪ್ರಯಾಣವನ್ನು ಮುಂದೂಡಲು ಬಯಸುತ್ತಾರೆ ಎಂದು ಸಮೀಕ್ಷೆಯೊಂದು ಹೇಳಿದೆ.
ಕೊರೋನಾ ಕಾರಣದಿಂದಾಗಿ ಹೆಚ್ಚಿನ ಸಂಖ್ಯೆಯ ಜನ ಪ್ರಯಾಣವನ್ನು ಮುಂದೂಡಲು ಬಯಸುವುದಾಗಿ ಸಮೀಕ್ಷೆಯಲ್ಲಿ ಗೊತ್ತಾಗಿದೆ. ಸಾಮಾನ್ಯವಾಗಿ ಅಕ್ಟೋಬರ್ ತಿಂಗಳಿನಲ್ಲಿ ರಜೆ, ಹಬ್ಬದ ಋತು ಆರಂಭವಾಗುತ್ತವೆ. ಆಗಸ್ಟ್ ಮತ್ತು ಸೆಪ್ಟೆಂಬರ್ ಭಾರತೀಯರಿಗೆ ಪ್ರಯಾಣದ ಬುಕ್ಕಿಂಗ್ ತಿಂಗಳುಗಳಾಗಿವೆ. ಅಕ್ಟೋಬರ್, ನವೆಂಬರ್ ನಲ್ಲಿ ದುರ್ಗಾಪೂಜೆ, ದಸರಾ, ದೀಪಾವಳಿ ಮೊದಲಾದ ಹಬ್ಬಗಳು ಬರುತ್ತವೆ. ಮಕ್ಕಳಿಗೆ ರಜಾದಿನಗಳು ಕೂಡ ಇರುವುದರಿಂದ ಈ ತಿಂಗಳುಗಳಲ್ಲಿ ಪ್ರಯಾಣಿಸುವವರ ಸಂಖ್ಯೆ ಹೆಚ್ಚಾಗಿರುತ್ತದೆ. ಪ್ರವಾಸಿ ಸ್ಥಳಗಳಿಗೂ ಹೆಚ್ಚಿನ ಸಂಖ್ಯೆಯ ಜನ ತೆರಳುತ್ತಾರೆ.
ಆದರೆ, ಕೊರೋನಾ ಕಾರಣದಿಂದ ಶೇಕಡಾ 69 ರಷ್ಟು ಜನ ಈ ವರ್ಷ ಪ್ರಯಾಣಿಸದೇ ಮನೆಯಲ್ಲೇ ಉಳಿಯಲಿದ್ದಾರೆ ಎಂದು ಮಾಧ್ಯಮ ಮತ್ತು ಸಮುದಾಯ ವೇದಿಕೆ ಸ್ಥಳೀಯ ವಲಯಗಳು ಹೇಳಿವೆ. 239 ಜಿಲ್ಲೆಗಳಲ್ಲಿ 25 ಸಾವಿರ ಜನರ ಸಂದರ್ಶಿಸಿ ಅಭಿಪ್ರಾಯ ಪಡೆಯಲಾಗಿದೆ.
ಸಾಮಾಜಿಕ ಸಮೀಕ್ಷೆಯಲ್ಲಿ ಶೇಕಡ 69 ರಷ್ಟು ಜನ ಪ್ರಯಾಣದಿಂದ ದೂರ ಉಳಿಯುವುದನ್ನು ಬಯಸುತ್ತಾರೆ. ಶೇಕಡ 13 ರಷ್ಟು ಮಂದಿ ಕುಟುಂಬದವರು ಮತ್ತು ಸ್ನೇಹಿತರನ್ನು ಭೇಟಿ ಮಾಡುವುದಾಗಿ ಹೇಳಿದ್ದಾರೆ. ಶೇಕಡಾ ಮೂರರಷ್ಟು ಜನ ಶೇಕಡ 12 ರಷ್ಟು ಜನ ಖಚಿತವಾಗಿಲ್ಲ ಎಂದು ತಿಳಿಸಿದ್ದಾರೆ. ಶಾಲೆಗಳು ಆರಂಭವಾಗದ ಕಾರಣ ಮಕ್ಕಳು ಮನೆಯಲ್ಲಿ ಉಳಿದಿದ್ದಾರೆ. ಕೊರೋನಾ ನಿಯಂತ್ರಣವಾಗದೇ ಪ್ರಯಾಣವಿಲ್ಲ ಎಂದು ಹೆಚ್ಚಿನ ಸಂಖ್ಯೆಯ ಜನ ತಿಳಿಸಿದ್ದಾರೆ.