ನವದೆಹಲಿ: ಆರ್ ಜೆ ಡಿ ನಾಯಕ, ಮಾಜಿ ಕೇಂದ್ರ ಸಚಿವ ರಘುವಂಶ್ ಪ್ರಸಾದ್ ಸಿಂಗ್ ತೀವ್ರ ಅನಾರೋಗ್ಯದಿಂದ ನಿಧನರಾಗಿದ್ದಾರೆ. ಅವರಿಗೆ 74 ವರ್ಷ ವಯಸ್ಸಾಗಿತ್ತು.
ಕೆಲ ತಿಂಗಳ ಹಿಂದೆ ರಘುವಂಶ್ ಪ್ರಸಾದ್ ಅವರಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿತ್ತು. ಈ ಹಿನ್ನಲೆಯಲ್ಲಿ ಅವರು ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಬಳಿಕ ಗುಣಮುಖರಾಗಿದ್ದ ರಘುವಂಶ್ ಅವರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದರು.
ಆದರೆ ಮತ್ತೆ ಅವರ ಆರೋಗ್ಯದಲ್ಲಿ ಏರುಪೇರಾದ ಕಾರಣ ದೆಹಲಿ ಏಮ್ಸ್ ಗೆ ದಾಖಲಿಸಲಾಗಿತ್ತು. ತಡರಾತ್ರಿ ಅವರ ಆರೋಗ್ಯ ಪರಿಸ್ಥಿತಿ ತೀರಾ ಹದಗೆಟ್ಟ ಪರಿಣಾಮ ವೆಂಟಿಲೇಟರ್ ನಲ್ಲಿ ಚಿಕಿತ್ಸೆ ಮುಂದುವರೆಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ರಘುವಂಶ್ ಪ್ರಸಾದ್ ನಿಧನ ಹೊಂದಿದ್ದಾರೆ ಎಂದು ತಿಳಿದು ಬಂದಿದೆ.
ರಘುವಂಶ್ ಪ್ರಸಾದ್ ಬಿಹಾರದ ಅಗ್ರನಾಯಕರಾಗಿ ಗುರುತಿಸಿಕೊಂಡಿದ್ದರು. ನರೇಗಾ ಯೋಜನೆಯ ಪ್ರಮುಖ ಶಕ್ತಿ ಎಂದೇ ಅವರನ್ನು ಕರೆಯಲಾಗುತ್ತಿತ್ತು. ಡಾ.ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರ್ಕಾರದ ಅವಧಿಯಲ್ಲಿ ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವರಾಗಿ ಕಾರ್ಯ ನಿರ್ವಹಿಸಿದ್ದರು. ಲೋಕಸಭೆಗೆ 5 ಭಾರಿ ಆಯ್ಕೆಯಾಗಿದ್ದರು.
ಇನ್ನು ಕಳೆದ ಮೂರು ದಿನಗಳ ಹಿಂದೆ ರಘುವಂಶ್ ಪ್ರಸಾದ್ ಆರ್ ಜೆ ಡಿ ಪಕ್ಷವನ್ನು ತೊರೆಯುತ್ತಿರುವುದಾಗಿ ಹೇಳಿದ್ದರು. ಈ ಬಗ್ಗೆ ಆರ್ ಜೆ ಡಿ ನಾಯಕ ಲಾಲು ಪ್ರಸಾದ್ ಯಾದವ್ ಅವರಿಗೆ ಪತ್ರ ಬರೆದಿದ್ದರು.