ಪೊಲೀಸರ ಮೇಲೆ ರಾಜಕಾರಣಿಗಳು ಮಾಡುವ ದರ್ಪ ಹೊಸದೇನಲ್ಲ. ಇಂತಹ ಸುದ್ದಿಗಳು ಆಗಾಗ ನಡೆಯುತ್ತಲೇ ಇವೆ. ಪ್ರಶ್ನೆ ಮಾಡಿದ ಪೊಲೀಸರ ಮೇಲೆ ದರ್ಪ ತೋರಿಸೋದಷ್ಟೆ ಅಲ್ಲ ಅವರನ್ನು ಕೆಲಸದಿಂದ ತೆಗೆದು ಹಾಕಿರುವ ಘಟನೆಗಳನ್ನೂ ನೋಡಿದ್ದೇವೆ. ಇದೀಗ ಇಂತಹದ್ದೇ ಘಟನೆ ತಮಿಳುನಾಡಿನಲ್ಲಿ ನಡೆದಿದೆ.
ಹೌದು, ತಮಿಳುನಾಡಿನಲ್ಲಿ ಕೊರೊನಾ ಆರ್ಭಟ ಹೆಚ್ಚಾಗಿದೆ. ಹೀಗಾಗಿ ಕಟ್ಟುನಿಟ್ಟಿನ ಕ್ರಮಕ್ಕೆ ಅಲ್ಲಿನ ಸರ್ಕಾರ ಮುಂದಾಗಿದ್ದು, ಒಂದು ನಗರದಿಂದ ಮತ್ತೊಂದು ನಗರಕ್ಕೆ ಸಂಚಾರ ಮಾಡಬೇಕೆಂದರೆ, ಇ ಪಾಸ್ ಕಡ್ಡಾಯ ಮಾಡಿದೆ. ಈ ಪಾಸ್ ಕೇಳಿದ್ದಕ್ಕೆ ಮಾಜಿ ಸಂಸದರೊಬ್ಬರು ಪೊಲೀಸಪ್ಪನ ಮೇಲೆ ದರ್ಪ ತೋರಿದ್ದಾರೆ.
ತಮಿಳುನಾಡಿನ ಡಿಎಂಕೆ ಪಕ್ಷದ ಮಾಜಿ ಸಂಸದ ಕೆ. ಅರ್ಜುನ್, ಸೇಲಂನಲ್ಲಿ ಕರ್ತವ್ಯ ನಿರತ ಪೊಲೀಸ್ ಅಧಿಕಾರಿ ಮೇಲೆ ದರ್ಪ ಮೆರೆದಿದ್ದಾರೆ. ಹೆದ್ದಾರಿಯ ಟೋಲ್ ಬಳಿ ಪೊಲೀಸ್ ಅಧಿಕಾರಿ ಅರ್ಜುನ್ ಕಾರ್ ತಡೆದು ಪಾಸ್ ಕೇಳಿದ್ದಾರೆ.
ಪಾಸ್ ಇಲ್ಲದೆ ಮುಂದೆ ಬಿಡುವುದಿಲ್ಲ ಎಂದು ತನ್ನ ಕರ್ತವ್ಯ ನಿರ್ವಹಿಸಿದ್ದಾರೆ ಪೊಲೀಸ್. ಆದರೆ ಈ ವೇಳೆ ನನ್ನ ಕಾರಿಗೇ ಪಾಸ್ ಕೇಳುವೆಯಾ ಎಂದು ಪೊಲೀಸ್ ಅಧಿಕಾರಿಯನ್ನು ತಳ್ಳಿ, ಆತನಿಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿ ಕಾಲಿನಿಂದ ಒದ್ದಿದ್ದಾರೆ ಈ ಮಾಜಿ ಸಂಸದ. ದುರಾದೃಷ್ಟವಶಾತ್ ಈ ಘಟನೆ ಸಂಬಂಧ ದೂರು ಕೂಡ ದಾಖಲಾಗಿಲ್ಲ ಎನ್ನಲಾಗುತ್ತಿದೆ.