ಮುಂಬೈ: ಹತ್ತು ವರ್ಷಗಳ ಹಿಂದೆ ನಾಸಿಕ್ ದ ಕಲ್ಯಾಣ್ ರೈಲ್ವೆ ನಿಲ್ದಾಣದಲ್ಲಿ ತಮ್ಮ ಕುಟುಂಬದ ಸದಸ್ಯರಿಂದ ಕಳೆದುಹೋಗಿದ್ದ ಎಂಟು ವರ್ಷದ ಬಾಲಕ ಇಂದು ರಾಷ್ಟ್ರ ಮಟ್ಟದ ಫುಟ್ಬಾಲ್ ಆಟಗಾರ.
ಅಕ್ಟೋಬರ್ 2 ರಂದು ಗಾಂಧಿ ಜಯಂತಿಯ ದಿನ ಆತ ಮರಳಿ ತನ್ನ ಕುಟುಂಬ ಸೇರಿದ್ದಾನೆ. 10 ವರ್ಷದ ನಂತರ ಸಿಕ್ಕ ತಮ್ಮ ಮಗನನ್ನು ನೋಡಿ ಕುಟುಂಬ ಸಂತಸದ ಕಣ್ಣೀರು ಹರಿಸಿತ್ತು.
ಉತ್ತರ ಪ್ರದೇಶದ ಸುಲ್ತಾನಪುರ ಜಿಲ್ಲೆಯ ಒಂದು ಗ್ರಾಮದವರಾದ ವಾಸಿಂ ಖಾನ್ ದುಬೈನಲ್ಲಿ ಉದ್ಯೋಗದಲ್ಲಿದ್ದರು. ಅವರ ಎಂಟು ವರ್ಷದ ಮಗ ಪಹೀಂ ಖಾನ್. 2010 ರಲ್ಲಿ ವಾಸಿಂ ಅವರು ರಜೆಗೆ ಮರಳಿದ್ದಾಗ ತಮ್ಮ ಕುಟುಂಬದ ಜೊತೆ ಮುಂಬೈ ಪ್ರವಾಸ ಹೊರಟಿದ್ದರು. ರೈಲು ಯುಪಿಯಿಂದ ಮಹಾರಾಷ್ಟ್ರ ಪ್ರವೇಶಿಸಿ ನಾಸಿಕ ದಾಟಿ ಕಲ್ಯಾಣಪುರ ನಿಲ್ದಾಣದಲ್ಲಿ ನಿಂತಿತ್ತು. ವಾಸಿಂ ಹಾಗೂ ಅವರ ಪತ್ನಿ ನಿದ್ರೆಗೆ ಜಾರಿದ್ದರು. ಪಹೀಂ ತನ್ನ ಇತರ ಸಹೋದರ, ಸಹೋದರಿಯರ ಜೊತೆ ಆಡಿಕೊಂಡಿದ್ದ. ಒಮ್ಮೆ ರೈಲು ಇಳಿದು ಬಾಟಲಿಯಲ್ಲಿ ಕುಡಿಯುವ ನೀರು ತರಲು ಹೋಗಿದ್ದ. ಆತ ಬರುವಷ್ಟರ ಹೊತ್ತಿಗೆ ರೈಲು ಹೊರಟಿತ್ತು. ಪಹೀಂ ಕುಟುಂಬದಿಂದ ಬೇರಾಗಿದ್ದ.
ಪಹೀಂ ಇಲ್ಲ ಎಂದು ಆತನ ಸಹೋದರಿ ಹಾಗೂ ತಾಯಿ ಬೊಬ್ಬೆ ಹಾಕುವುದನ್ನು ನೋಡಿ ತಂದೆ ವಾಸಿಂ ನಿದ್ರೆಯಿಂದ ಎದ್ದರು. ಆದರೆ, ಆಗಲೇ ರೈಲು ಭುಸ್ವಾಲ್ ನಿಲ್ದಾಣ ತಲುಪಿಯಾಗಿತ್ತು. ಅಲ್ಲಿಂದಲೇ ಅವರು ವಾಪಸ್ ಕಲ್ಯಾಣ್ ರೈಲ್ವೆ ನಿಲ್ದಾಣಕ್ಕೆ ಬಂದು ಹುಡುಕಿದ್ದರು. ಆದರೆ, ಅಷ್ಟು ಹೊತ್ತಿಗಾಗಲೇ ಬಾಲಕ ಇನ್ನೊಂದು ರೈಲು ಹಿಡಿದುಕೊಂಡು ಕುಟುಂಬದವರನ್ನು ಹುಡುಕುತ್ತ ಮುಂಬೈ ಕಡೆ ಹೋಗಿದ್ದ. ಸಾಕಷ್ಟು ಹುಡುಕಾಟದ ನಂತರ ಬಾಲಕ ಸಿಗದ ಕಾರಣ ವಾಸಿಂ ಅವರು ನಾಪತ್ತೆ ಪ್ರಕರಣ ದಾಖಲಿಸಿದ್ದರು.
ಇತ್ತ ಕುಟುಂಬದಿಂದ ತಪ್ಪಿಸಿಕೊಂಡ ಬಾಲಕ ಪಹೀಂಗೆ ತನ್ನ ಊರು ಸುಲ್ತಾನಪುರ ಎಂಬುದು ಬಿಟ್ಟು ಬೇರೆ ವಿವರ ಗೊತ್ತಿರಲಿಲ್ಲ. ಇದರಿಂದ ನಿರಂತರವಾಗಿ ಅಳುತ್ತಿದ್ದ. ಪೊಲೀಸರು ಆತನನ್ನು ರಕ್ಷಿಸಿ ನವಜೀವನ ಮಕ್ಕಳ ಪಾಲನಾ ಕೇಂದ್ರಕ್ಕೆ ಕಳಿಸಿದ್ದರು. ಅಲ್ಲಿ ಆತ ಓದಿ, ಬೆಳೆದ. 19 ನೇ ವಯಸ್ಸಿಗೆ ಕಾಲಿರಿಸಿದ್ದಾನೆ. 12 ನೇ ತರಗತಿ ಪರೀಕ್ಷೆ ಬರೆದಿದ್ದು, ಫಲಿತಾಂಶಕ್ಕಾಗಿ ಕಾಯುತ್ತಿದ್ದಾನೆ. ಇದರೊಟ್ಟಿಗೆ ಆತ ಉತ್ತಮ ಫುಟ್ಬಾಲ್ ಆಟಗಾರನಾಗಿ ರೂಪುಗೊಂಡಿದ್ದಾನೆ. ಎಂಪಿ ರಾಜ್ಯ ತಂಡದಲ್ಲಿ ಆಡಿದ್ದು, ಒಂದು ರಾಷ್ಟ್ರೀಯ ಪಂದ್ಯವನ್ನೂ ಆಡಿದ್ದಾನೆ. ಭಾರತ ಫುಟ್ಬಾಲ್ ತಂಡಕ್ಕೆ ಆಡಬೇಕು ಎಂಬುದು ಆತನ ಕನಸು.
ಈ ನಡುವೆ ಪಹೀಂ ವೈಯಕ್ತಿಕ ಜೀವನದಲ್ಲಿ ಒಂದು ಗೋಲ್ ಹೊಡೆದಿದ್ದಾನೆ. ಸುಲ್ತಾನಪುರ ಎ ಎಸ್ ಪಿ ಶಿವರಾಜ್ ಅವರು ಸ್ಥಳೀಯ ಸಾಮಾಜಿಕ ಕಾರ್ಯಕರ್ತ ಗುಫ್ರಾನ್ ಖಾನ್ ಕರೆದು ಬಾಲಕನ ನಾಪತ್ತೆಯ ಕತೆ ಹಾಗೂ ಫೋಟೋ ಹಂಚಿಕೊಂಡಿದ್ದರು. ಅವರು ಸಾಮಾಜಿಕ ಜಾಲತಾಣದಲ್ಲಿ ಫೋಟೋ, ವಿವರ ಹರಿಬಿಟ್ಟಿದ್ದರು. ಕೆಲವೇ ಹೊತ್ತಿನಲ್ಲಿ ಯುವಕ ಸಿಕ್ಕಿದ್ದ.