ಆಗ್ರಾ: ಸಿಟ್ಟು ಯಾರಿಗೆ ತಾನೇ ಇರಲ್ಲ ಹೇಳಿ. ಇದಕ್ಕೆ ಪ್ರಾಣಿ – ಪಕ್ಷಿಗಳೂ ಹೊರತಾಗಿಲ್ಲ. ಒಮ್ಮೆಮ್ಮೆ ಆಹಾರಕ್ಕಾಗಿ ಅವು ಕಾದಾಡಿದರೆ, ಮತ್ತೆ ಕೆಲವೊಮ್ಮೆ ಅಸ್ತಿತ್ವಕ್ಕಾಗಿ ಹೋರಾಡುತ್ತವೆ. ಇಲ್ಲಿ ಕಪ್ಪು ಹದ್ದು ಮತ್ತು ಗೂಬೆ ಭಯಂಕರವಾಗಿ ಕಿತ್ತಾಡಿಕೊಂಡಿದ್ದು, ಈಗ ಸಖತ್ ಸುದ್ದಿಯಾಗಿದೆ.
ಒಂದು ಹಂತದಲ್ಲಿ ಎರಡೂ ಪಕ್ಷಿಗಳದ್ದು ಸಮಬಲ ಹೋರಾಟ ಎಂದೆನಿಸಿದರೂ ಸಹಜವಾಗಿ ದೊಡ್ಡ ಪಕ್ಷಿಯಾದ ಹದ್ದು ಮೇಲುಗೈ ಸಾಧಿಸಿತು. ಅದು ತನ್ನ ಮುಷ್ಟಿಯಲ್ಲಿ ಗೂಬೆಯನ್ನು ಹಿಡಿದಿಟ್ಟುಕೊಂಡು ಅದರ ಕಥೆ ಮುಗಿಸಲು ಹೊರಟೇಬಿಟ್ಟಿತ್ತು. ಆದರೆ ಹಾಗೂ ಹೀಗೂ ಸಂಭಾಳಿಸಿಕೊಂಡ ಗೂಬೆ ಅದರಿಂದ ಬಚಾವಾಗಿ ಸಣ್ಣಪುಟ್ಟ ಗಾಯಗಳೊಂದಿಗೆ ಈಗ ರಕ್ಷಿಸಲ್ಪಟ್ಟಿದೆ.
ಗೂಬೆಯನ್ನು ಸಿಐಎಸ್ಎಫ್ ತಂಡ ರಕ್ಷಣೆ ಮಾಡಿದ್ದಲ್ಲದೆ, ಬಳಿಕ ವನ್ಯಜೀವಿ ಅಧಿಕಾರಿಗಳಿಗೆ ಹಸ್ತಾಂತರಿಸಿದ್ದಾರೆ. ಗೂಬೆಯ ಬಲ ರೆಕ್ಕೆಗೆ ತೀವ್ರತರದ ಗಾಯಗಳಾಗಿದ್ದು, ಸದ್ಯ ಅದಕ್ಕೆ ಹಾರಲು ಸಹ ಆಗುತ್ತಿಲ್ಲ. ಈಗ ಗೂಬೆಯನ್ನು ಚಿಕಿತ್ಸೆಗೊಳಪಡಿಸಿದ್ದು, ನಿಗಾದಲ್ಲಿಡಲಾಗಿದೆ ಎಂದು ವನ್ಯಜೀವಿ ಮಂಡಳಿ ಇಲಾಖೆಯ ಪ್ರಾಣಿ ಆರೋಗ್ಯ ಕೇಂದ್ರ ಹೇಳಿದೆ.