ಇಲ್ಲಿದೆ ಏಷ್ಯಾದ ಮೊದಲ ಮಹಿಳಾ ಬಸ್ ಚಾಲಕಿ ಕುರಿತ ಮಾಹಿತಿ 21-08-2020 6:27AM IST / No Comments / Posted In: Latest News, India, Special ಮಹಿಳೆಯರು ಇಂದು ಎಲ್ಲ ರಂಗದಲ್ಲೂ ಪುರುಷರಿಗೆ ಸರಿಸಮಾನರಾಗಿ ದುಡಿಯುತ್ತಿದ್ದಾರೆ. ಭಾರತೀಯ ಸೇನೆಯಲ್ಲೂ ಮಹಿಳಾ ಪೈಲೆಟ್ ಗಳು ಕಾರ್ಯ ನಿರ್ವಹಿಸುತ್ತಿದ್ದಾರೆ. ಇದರ ಮಧ್ಯೆ ಜೀವನ ನಿರ್ವಹಣೆಗೆಂದು ಚಾಲಕ ವೃತ್ತಿ ಆರಿಸಿಕೊಂಡಿದ್ದ ತಮಿಳುನಾಡಿನ ವಸಂತಕುಮಾರಿ 1993 ರಿಂದ ಬಸ್ ಚಾಲನೆ ಆರಂಭಿಸಿದ್ದು, ಆ ಮೂಲಕ ಏಷ್ಯಾದ ಮೊದಲ ಮಹಿಳಾ ಬಸ್ ಡ್ರೈವರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ವಸಂತಕುಮಾರಿ ಇನ್ನೂ ಮಗುವಾಗಿದ್ದಾಗಲೇ ಅವರ ತಾಯಿ ಸಾವನ್ನಪ್ಪಿದ್ದರು. ಬಳಿಕ ತಂದೆ ಮತ್ತೊಂದು ವಿವಾಹವಾಗಿದ್ದು, ವಸಂತಕುಮಾರಿ ಸಂಬಂಧಿಯೊಬ್ಬರ ಮನೆಯಲ್ಲಿ ಬೆಳೆದಿದ್ದರು. ಬಾಲ್ಯದಿಂದಲೇ ಚಾಲನೆ ಕುರಿತು ಆಸಕ್ತಿ ಹೊಂದಿದ್ದ ಅವರಿಗೆ 19 ವರ್ಷವಿದ್ದಾಗಲೇ ಮದುವೆ ಮಾಡಿಕೊಡಲಾಗಿತ್ತು. ಕಟ್ಟಡ ನಿರ್ಮಾಣ ಕಾರ್ಯ ಮಾಡುತ್ತಿದ್ದ ಪತಿಯ ಆದಾಯ, ಜೀವನ ನಿರ್ವಹಣೆಗೆ ಸಾಕಾಗದ ಕಾರಣ, ವಸಂತಕುಮಾರಿ ತಮ್ಮ ನೆಚ್ಚಿನ ಚಾಲನಾ ವೃತ್ತಿ ಮಾಡಲು ಮುಂದಾದರು. ಆರಂಭದಲ್ಲಿ ಇದಕ್ಕೆ ಹಲವು ಅಡೆತಡೆಗಳು ಎದುರಾಗಿದ್ದು, ಕಡೆಗೆ ಅಂದಿನ ಮುಖ್ಯಮಂತ್ರಿಯಾಗಿದ್ದ ಜಯಲಲಿತಾ, ವಸಂತಕುಮಾರಿಯವರ ಆಸಕ್ತಿಯನ್ನು ಗುರುತಿಸಿ ಅಧಿಕಾರಿಗಳಿಗೆ ಚಾಲಕ ಹುದ್ದೆಗೆ ವಸಂತ ಕುಮಾರಿಯವರನ್ನು ಪರಿಗಣಿಸುವಂತೆ ಆದೇಶಿಸಿದ್ದರು. ಇದೀಗ ವಸಂತ ಕುಮಾರಿ ನಿವೃತ್ತಿಯಾಗಿದ್ದು, ಆದರೆ ಏಷ್ಯಾದ ಮೊದಲ ಮಹಿಳಾ ಬಸ್ ಚಾಲಕಿ ಎಂಬ ಹೆಗ್ಗಳಿಕೆಗೆ ಮುಂದುವರೆದಿದೆ. ಇವರ 24 ವರ್ಷಗಳ ಸೇವಾವಧಿಯಲ್ಲಿ ಒಂದೇ ಒಂದು ಅಪಘಾತ ಎಸಗಿಲ್ಲವೆಂಬುದು ಗಮನಾರ್ಹ.