ಹೈದ್ರಾಬಾದ್ ಮುಸ್ಲಿಂ ಮಹಿಳೆಯರು ಖುಷಿಪಡುವ ಸುದ್ದಿಯೊಂದಿದೆ. ಹೈದ್ರಾಬಾದ್ ನ ಮಸೀದಿ-ಎ-ಮುಸ್ತಫಾದಲ್ಲಿ ಜಿಮ್ ಶುರುವಾಗಿದೆ. ತರಬೇತುದಾರರು ಮಹಿಳೆಯರಿಗೆ ಜಿಮ್ ತರಬೇತಿ ನೀಡಲಿದ್ದಾರೆ. ತೆಲಂಗಾಣದಲ್ಲಿ ಇದೇ ಮೊದಲ ಬಾರಿಗೆ ಮಹಿಳೆಯರಿಗಾಗಿ ಮಸೀದಿಯಲ್ಲಿ ಜಿಮ್ ಶುರುವಾಗಿದೆ. ಮಹಿಳೆಯರ ಆರೋಗ್ಯದ ಹಿನ್ನಲೆಯಲ್ಲಿ ಜಿಮ್ ಆರಂಭಿಸಲಾಗಿದೆ.
ಸರ್ವೆಯೊಂದರ ಫಲಿತಾಂಶದ ನಂತ್ರ ಜಿಮ್ ತೆರೆಯಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಕೊಳೆಗೇರಿಗಳಲ್ಲಿ ವಾಸಿಸುವ ಶೇಕಡಾ 52 ರಷ್ಟು ಮಹಿಳೆಯರು ಅನೇಕ ಅಪಾಯಕಾರಿ ಕಾಯಿಲೆಗಳನ್ನು ಎದುರಿಸುತ್ತಿದ್ದಾರೆ ಎಂದು ಸಮೀಕ್ಷೆಯೊಂದು ಬಹಿರಂಗಪಡಿಸಿದೆ. ಈ ಸಮೀಕ್ಷೆಯಲ್ಲಿ, 25 ರಿಂದ 55 ವರ್ಷ ವಯಸ್ಸಿನ ಮಹಿಳೆಯರ ಆರೋಗ್ಯಕ್ಕೆ ಸಂಬಂಧಿಸಿದ ಮಾಹಿತಿಯನ್ನು ಕಲೆ ಹಾಕಲಾಗಿದೆ. ಮಹಿಳೆಯರು ಅಧಿಕ ರಕ್ತದೊತ್ತಡ, ಮಧುಮೇಹ ಮತ್ತು ಥೈರಾಯ್ಡ್ ರೋಗಗಳನ್ನು ಎದುರಿಸುತ್ತಿದ್ದಾರೆ ಎಂದು ಸಮೀಕ್ಷೆಯಲ್ಲಿ ಕಂಡುಬಂದಿದೆ.
ಎನ್‌ಜಿಒ ಸಹಾಯದಿಂದ ಸಿದ್ಧಪಡಿಸಿದ ಜಿಮ್‌ನಲ್ಲಿ ವೃತ್ತಿಪರ ತರಬೇತುದಾರರು ಮಹಿಳೆಯರಿಗೆ ದಿನಕ್ಕೆ ಎರಡು ಬಾರಿ ವ್ಯಾಯಾಮ ಹೇಳಿಕೊಡಲಿದ್ದಾರೆ. ಇದರ ಜೊತೆಗೆ ತರಬೇತುದಾರರು ಮಹಿಳೆಯರ ಆರೋಗ್ಯ ಸಮಸ್ಯೆಗಳ ಬಗ್ಗೆಯೂ ಗಮನ ನೀಡಲಿದ್ದಾರೆ.
ಹೆಲ್ಪಿಂಗ್ ಹ್ಯಾಂಡ್ ಫೌಂಡೇಶನ್ ವ್ಯವಸ್ಥಾಪಕ ಟ್ರಸ್ಟಿ ಮುಜತಾಬಾ ಹಸನ್ ಅಸ್ಕರಿ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಡಯಟ್ ಬಗ್ಗೆ ಮಹಿಳೆಯರಿಗೆ ಮಾಹಿತಿ ನೀಡಲಾಗುವುದು. ಮೂತ್ರಪಿಂಡ ಮತ್ತು ಕಣ್ಣಿನ ತೊಂದರೆಗಳ ತಪಾಸಣೆ ನಡೆಸಲಾಗುವುದು ಎಂದವರು ಹೇಳಿದ್ದಾರೆ.