ದೇಶದಲ್ಲಿ ಪ್ರತಿವರ್ಷ 1.40 ಲಕ್ಷ ಮಕ್ಕಳು ಕಾಣೆಯಾಗುತ್ತಿದ್ದು, ಇವರಲ್ಲಿ ಶೇ.40ರಷ್ಟು ಮಕ್ಕಳು ಪತ್ತೆಯಾಗುವುದಿಲ್ಲವೆಂದು ಅಂಕಿ-ಅಂಶಗಳು ಬಹಿರಂಗಗೊಳಿಸಿದೆ. ಆದರೆ ಇದೇ ರೀತಿ ವಾರಣಾಸಿಯಲ್ಲಿ ನಾಪತ್ತೆಯಾಗಿದ್ದ ಧ್ರುವ ಎನ್ನುವ 16 ವರ್ಷದ ಬಾಲಕ ಮುಂಬೈನಲ್ಲಿ ಪತ್ತೆಯಾಗಿರುವುದು ಅಚ್ಚರಿಗೆ ಕಾರಣವಾಗಿದೆ.
ಹೌದು, ವಾರಣಾಸಿಯಲ್ಲಿ ಕಾಣೆಯಾಗಿದ್ದ ಧ್ರುವ ನಾಪತ್ತೆಯಾಗಿ ಒಂದು ತಿಂಗಳು ಕಳೆಯುತ್ತಾ ಬಂದರೂ, ಆತನ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗದಿದ್ದಾಗ, ಆತ ಸಿಗುವ ಆಶಾಗೋಪುರ ಕುಸಿಯುತ್ತಾ ಬಂದಿತ್ತು. ಆದರೆ ಇದ್ದಕ್ಕಿದ್ದಂತೆ ಧ್ರುವನ ಸಂಬಂಧಿಯೊಬ್ಬರಿಗೆ ಮುಂಬೈನಿಂದ ಯುವತಿಯೊಬ್ಬರು ಕರೆ ಮಾಡಿ ಧ್ರುವ ಸಿಕ್ಕಿರುವ ವಿಷಯವನ್ನು ತಿಳಿಸಿದ್ದಾರೆ.
ಅಂಗನ್ ಎನ್ನುವ ಎನ್‌ಜಿಒ ಮುಂಬೈನ ವಡಾಲ ಎನ್ನುವ ಪ್ರದೇಶದಲ್ಲಿ ಧ್ರುವ ಇರುವುದು ಕಾಣಿಸಿದೆ. ಈ ವೇಳೆ ಎನ್‌ಜಿಒದ ಪ್ರತಿನಿಧಿ ಸುನೀತಾ ಎನ್ನುವವರು ಎರಡು ದಿನ ಗಮನಿಸಿ, ಬಳಿಕ ಆತನ ಬಳಿ ಹೋಗಿ ವಿಚಾರಿಸಿದ್ದಾರೆ.
ಈ ವೇಳೆ ವಾರಣಾಸಿಯಿಂದ ತಪ್ಪಿಸಿಕೊಂಡು ಬಂದಿರುವುದಾಗಿ ಬಾಲಕ ಹೇಳಿದ್ದಾನೆ. ಬಳಿಕ ಆತನಿಂದ ಧ್ರುವ ಸಂಬಂಧಿಕರ ಫೋನ್ ನಂಬರ್ ಪಡೆದುಕೊಂಡು ಕರೆ ಮಾಡಿ ವಿಷಯ ಮುಟ್ಟಿಸಿದ್ದಾಳೆ. ಬಳಿಕ ಬಾಲಕ ಮನೆ ಸೇರಿದ್ದಾನೆ. ಈ ರೀತಿಯಾಗದಂತೆ ಎಲ್ಲ ಪೋಷಕರು ಜಾಗೃತಿ ವಹಿಸಬೇಕು ಎಂದು ಎನ್‌ಜಿಒ ಜಾಗೃತಿ ಮೂಡಿಸಿದೆ.