ರಾಜಕೀಯ ಪಕ್ಷಗಳಲ್ಲಿ ವಿವಿಧ ಘಟಕ ಕೋಶಗಳಿರುತ್ತವೆ, ಎಲ್ಲ ವರ್ಗವನ್ನೂ ಒಳಗೊಳ್ಳುವುದು ಮತ್ತು ಅವರಿಗೆ ಪ್ರಾತಿನಿಧತ್ವ ಕೊಡುವುದು ಪಕ್ಷಗಳ ಉದ್ದೇಶ. ಆದರೆ ಲೈಂಗಿಕ ಅಲ್ಪ ಸಂಖ್ಯಾತರಿಗೆ ಸ್ಥಾನಮಾನ ಕೊಡಲು ಇಷ್ಟು ವರ್ಷವೂ ಯಾವೊಂದು ರಾಜಕೀಯ ಪಕ್ಷಗಳು ಯೋಚಿಸಿರಲಿಲ್ಲ.
ಇದೇ ಮೊದಲ ಬಾರಿಗೆ ಎನ್‌ಸಿಪಿ ಈ ದಿಕ್ಕಿನಲ್ಲಿ ಹೆಜ್ಜೆ ಇಟ್ಟಿದೆ. ತನ್ನ ಪಕ್ಷದಲ್ಲಿ ಎಲ್‌ಜಿಬಿಟಿ ಕೋಶ ತೆರೆದಿದೆ. ಈ ಮೂಲಕ ಈ ರೀತಿ ಕೋಶವನ್ನು ಹೊಂದಿರುವ ದೇಶದ ಮೊದಲ ರಾಜಕೀಯ ಪಕ್ಷವಾಗಿ ಕಾಣಿಸಿಕೊಂಡಿದೆ.
ಎನ್‌ಸಿಪಿ ಮಹಾರಾಷ್ಟ್ರ ಅಧ್ಯಕ್ಷ ಜಯಂತ್ ಪಾಟೀಲ್ ಮತ್ತು ಸಂಸದೆ ಸುಪ್ರಿಯಾ ಸುಲೇ ಅವರು ಕೋಶದ ನೂತನ ಅಧ್ಯಕ್ಷರಾಗಿ ಪ್ರಿಯಾ ಪಾಟೀಲ್ ಅವರನ್ನು ನೇಮಿಸಿದರು.
ಯುವತಿ ಕೋಶವನ್ನು ಮೊದಲು ಸ್ಥಾಪಿಸಿದ್ದು ಎನ್‌ಸಿಪಿ. ಈಗ, ವಂಚಿತರಿಗೆ ನ್ಯಾಯ ಒದಗಿಸಲು ಎಲ್‌ಜಿಬಿಟಿ ಕೋಶವನ್ನು ಸ್ಥಾಪಿಸಿದೆ ಎಂದು ಪಾಟೀಲ್ ಇದೇ ವೇಳೆ ತಿಳಿಸಿದ್ದಾರೆ.
ಸಲಿಂಗಿಗಳು, ದ್ವಿಲಿಂಗಿ, ಲಿಂಗ ಬದಲಿಸಿಕೊಂಡವರು ಎಲ್‌ಜಿಬಿಟಿ ವ್ಯಾಪ್ತಿಯಲ್ಲಿ ಬರುತ್ತಾರೆ. ಎನ್‌ಸಿಪಿ ಪ್ರಯತ್ನಕ್ಕೆ ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆ ಮಹಾಪೂರವೇ ಹರಿದುಬರುತ್ತಿದೆ.