ಆಕ್ಸ್ ಫರ್ಡ್ ವಿಶ್ವವಿದ್ಯಾಲಯದ ಕೊರೊನಾ ಲಸಿಕೆ ಮೇಲೆ ಎಲ್ಲರ ಕಣ್ಣಿದೆ. ಯಾವಾಗ ಲಸಿಕೆ ಮಾರುಕಟ್ಟೆಗೆ ಬರುತ್ತೆ ಎಂಬ ನಿರೀಕ್ಷೆಯಲ್ಲಿ ಜನರು ಕಾಯ್ತಿದ್ದಾರೆ. ಸುರಕ್ಷತೆ ಮತ್ತು ಅಡ್ಡ ಪರಿಣಾಮಗಳಿಂದಾಗಿ ಇದರ ಪರೀಕ್ಷೆ ವಿಳಂಬವಾಗಿತ್ತು. ಮತ್ತೆ ಪರೀಕ್ಷೆ ಶುರುವಾಗಿದೆ. ಈ ಲಸಿಕೆಯನ್ನು ಭಾರತದ ಸೀರಮ್ ಇನ್ಸ್ಟಿಟ್ಯೂಟ್ ಆಫ್ ಪುಣೆ ಅಭಿವೃದ್ಧಿಪಡಿಸುತ್ತಿದೆ.
ಈ ಲಸಿಕೆಗೆ ಸಂಬಂಧಿಸಿದ ಇತ್ತೀಚಿನ ಮಾಹಿತಿಯೆಂದ್ರೆ ಈ ಲಸಿಕೆ ಅಂತಿಮ ಹಂತದ ಪ್ರಯೋಗ ಪಿಜಿಐ ಚಂಡೀಗಢದಲ್ಲಿ ಪ್ರಾರಂಭವಾಗಿದೆ. ಈ ಲಸಿಕೆಯ ಪ್ರಯೋಗಕ್ಕಾಗಿ ದೇಶದ 17 ಸಂಸ್ಥೆಗಳನ್ನು ಆಯ್ಕೆ ಮಾಡಲಾಗಿದೆ. ಅದ್ರಲ್ಲಿ ಪಿಜಿಐ, ಚಂಡೀಗಢ ಒಂದು. ಬುಧವಾರದಿಂದ ಅಂತಿಮ ಹಂತದ ಪರೀಕ್ಷೆ ಪ್ರಯೋಗ ಶುರುವಾಗಿದೆ.
ಸ್ವಯಂಸೇವಕರಿಗೆ ಲಸಿಕೆಯನ್ನು ಇಂದು ಮತ್ತು ನಾಳೆ ನೀಡಲಾಗುವುದು. ಲಸಿಕೆಯ ಮೊದಲ ಡೋಸ್ ಫಲಿತಾಂಶಗಳು 15 ದಿನಗಳಲ್ಲಿ ಬರಲಿದೆ ಎಂದು ಹೇಳಲಾಗುತ್ತಿದೆ. 29 ದಿನಗಳ ನಂತರ ಎರಡನೇ ಡೋಸ್ ಲಸಿಕೆ ನೀಡಲಾಗುವುದು. 400 ಕ್ಕೂ ಹೆಚ್ಚು ಸ್ವಯಂಸೇವಕರು ಮೂರನೇ ಹಂತದ ಮಾನವ ಪ್ರಯೋಗಗಳಿಗೆ ಹೆಸರು ನೋಂದಾಯಿಸಿಕೊಂಡಿದ್ದಾರೆ ಎನ್ನಲಾಗಿದೆ.
ಪಿಜಿಐ 10 ಸ್ವಯಂಸೇವಕರನ್ನು ಆಯ್ಕೆ ಮಾಡಿಕೊಂಡಿದ್ದು, ಅವ್ರ ಆರೋಗ್ಯ ಪರೀಕ್ಷೆ ಮಾಡಿದೆ. ಕೋವಿಡ್-19 ಸೇರಿದಂತೆ ಕೆಲ ಪರೀಕ್ಷೆ ನಂತ್ರ ಸ್ವಯಂಸೇವಕರಿಗೆ ಲಸಿಕೆ ನೀಡಲಾಗುವುದು.