ಕೊರೊನಾ ಸೋಂಕು ತಗಲಿಸಿಕೊಂಡು ಖಚಿತವಾದ ಮೇಲೆ ಆಸ್ಪತ್ರೆ ತಲುಪಲು ಅಗತ್ಯವಾದ ಆಂಬುಲೆನ್ಸ್ ಗೆ ರೋಗಿಗಳು ದುಬಾರಿ ಬೆಲೆ ತೆರಬೇಕಾದ ವಾತಾವರಣ ನಿರ್ಮಾಣವಾಗಿದೆ. ಅತೀ ಕನಿಷ್ಟ 10-15 ಕಿಮೀ ದೂರದ ಪ್ರಯಾಣಕ್ಕೂ ವಿದೇಶಿ ವಿಮಾನ ಪ್ರಯಾಣದ ದರದಷ್ಟು ವಸೂಲಿ ಮಾಡುತ್ತಿರುವ ಉದಾಹರಣೆ ದೇಶದ ವಿವಿಧೆಡೆ ನಡೆದಿದೆ.
ಪಂಜಾಬ್ ಮತ್ತು ಮಹಾರಾಷ್ಟ್ರ ಹೊರತುಪಡಿಸಿ ಇತರ ರಾಜ್ಯಗಳಲ್ಲಿ ಶುಲ್ಕ ನಿಯಂತ್ರಣದ ಕ್ರಮ ಕೈಗೊಳ್ಳಲಾಗುತ್ತಿದೆ. ದರವನ್ನು ಗರಿಷ್ಠ ದರ ನಿಗದಿ ಮಾಡಲಾಗುತ್ತಿದೆ. ಮುಂಬೈ ಜನರು ಹತ್ತು ಹದಿನೈದು ಕಿಲೋಮೀಟರ್ ಪ್ರಯಾಣಕ್ಕೆ 30,000 ನೀಡಿದ್ದಿದೆ. ಬರೋಬ್ಬರಿ ಪ್ರತಿ ಕಿಲೋಮೀಟರಿಗೆ 3000 ರೂ. ಪುಣೆಯಲ್ಲಿ ವಸೂಲಿ ಮಾಡಲಾಗಿದೆ. ಏಳು ಕಿಮೀ ಪ್ರಯಾಣಕ್ಕೆ ಒಂದು ಪ್ರಕರಣದಲ್ಲಿ 8000 ವಸೂಲಿ ಮಾಡಿದ್ದಾರೆ.
ಮುಂಬೈನದ್ದು ಆ ಕತೆಯಾದರೆ ಬೆಂಗಳೂರಿನಲ್ಲಿ ವ್ಯಕ್ತಿಯೊಬ್ಬರು 54 ವರ್ಷದ ತಾಯಿಯನ್ನು ಆಸ್ಪತ್ರೆಗೆ ಸೇರಿಸಲು ಆರು ಕಿಮೀ ಆಂಬುಲೆನ್ಸ್ ಪ್ರಯಾಣಕ್ಕೆ15 ಸಾವಿರ ರೂ. ನೀಡಿದ್ದಾರೆ.
ಕೊಲ್ಕೊತ್ತಾದಲ್ಲಿ ಖಾಸಗಿ ಆಂಬುಲೆನ್ಸ್ ಗಳು 5 ಕಿಲೋಮೀಟರ್ ಒಳಗಿನ ಪ್ರಯಾಣಕ್ಕೆ 6ರಿಂದ 8 ಸಾವಿರ ರೂ. ವಸೂಲಿ ಮಾಡುತ್ತಿವೆ, ಇನ್ನು ಕೆಲವು ಕಡೆ ಆಂಬುಲೆನ್ಸ್ ಪಿಪಿಇ ಕಿಟ್ ಗೆಂದು ಮೂರು ಸಾವಿರ ರೂ. ಕೇಳುತ್ತಿದ್ದಾರೆ.
ಹೈದರಾಬಾದ್ ನಲ್ಲಿ ವ್ಯಕ್ತಿಯೊಬ್ಬರು ತಮ್ಮ ಸಂಬಂಧಿಯನ್ನು ಒಂದು ಆಸ್ಪತ್ರೆಯಿಂದ ಇನ್ನೊಂದು ಆಸ್ಪತ್ರೆಗೆ ಶಿಫ್ಟ್ ಮಾಡಲು 20 ಕಿಲೋಮೀಟರ್ ಅಂಬುಲೆನ್ಸ್ ಪ್ರಯಾಣಕ್ಕೆ 11000 ರೂ. ನೀಡಿದ್ದಾರೆ. ಆದರೆ ಅದರಲ್ಲಿ ವೆಂಟಿಲೆಟರ್, ಅರೆ ವೈದ್ಯರು ಸಹ ಇರಲಿಲ್ಲ.
ಬಿಹಾರದಲ್ಲಿ ಖಾಸಗಿ ಆಂಬ್ಯುಲೆನ್ಸ್ ಗಳು ಸಾಮಾನ್ಯ ಶುಲ್ಕಕ್ಕಿಂತ ಐದರಿಂದ ಹತ್ತುಪಟ್ಟು ವಸೂಲಿ ಮಾಡುತ್ತಿವೆ.
ವಿಶ್ವ ಆರೋಗ್ಯ ಸಂಸ್ಥೆ ಪ್ರಕಾರ ಒಂದು ಲಕ್ಷ ಜನಸಂಖ್ಯೆಗೆ ಕನಿಷ್ಠ ಒಂದು ಅಂಬುಲೆನ್ಸ್ ಇರಬೇಕೆಂದಿದೆ. ಆದರೆ ದೇಶದ ಬೆರಣಿಕೆಯ ರಾಜ್ಯಗಳಲ್ಲಿ ಈ ವ್ಯವಸ್ಥೆ ಇದೆ. ಬೆಂಗಳೂರಲ್ಲಿ 1.4 ಲಕ್ಷ ಜನಸಂಖ್ಯೆಗೊಂದು ಆಂಬ್ಯುಲೆನ್ಸ್ ಇದೆ.