ಕೊರೋನಾ ಕಾಟ ನಮಗೆ ತಪ್ಪಿದ್ದಲ್ಲ. ನಮ್ಮೆಲ್ಲರನ್ನು ಅದು ಬಿಟ್ಟು ಹೋಗುವಂತೆ ಕಾಣುತ್ತಿಲ್ಲ. ಅದರೊಟ್ಟಿಗೆ ಬದುಕುವ ಅನಿವಾರ್ಯತೆ ಸೃಷ್ಟಿಸಿಬಿಟ್ಟಿದೆ.
ಹಾಗೆಂದು ಸುಮ್ಮನೆ ಕೂರಲೂ ಸಾಧ್ಯವಿಲ್ಲ. ಕೆಲಸಗಳು ಸಾಗಬೇಕಿದೆ, ಬದುಕು ನಡೆಯಬೇಕಿದೆ. ಸೋಂಕು ತಗುಲದಂತೆ ಎಚ್ಚರವಾಗಿ ಬಾಳಬೇಕಿದೆ. ಅಕಸ್ಮಾತ್ ಸೋಂಕು ತಗುಲಿದರೆ, ಚಿಕಿತ್ಸೆ ಪಡೆಯಬೇಕಿದೆ. ಒಂದೋ ಸಾಯುತ್ತೇವೆ, ಇಲ್ಲವೇ ಬದುಕುತ್ತೇವೆ ಎನ್ನುವ ಸ್ಥಿತಿ ಬಂದಾಗಿದೆ.
ಆದರೆ, ಕಣ್ಣಿಗೆ ಕಾಣದ ಈ ವೈರಾಣುವಿನ ವಿರುದ್ಧದ ಹೋರಾಟದಲ್ಲಿ ವೈದ್ಯರು, ಪೊಲೀಸರು ಸೇರಿದಂತೆ ಕೊರೋನಾ ಕಲಿಗಳ್ಯಾರೂ ಶಸ್ತ್ರತ್ಯಾಗ ಮಾಡುವಂತಿಲ್ಲ. ಸಶಸ್ತ್ರರಾಗಿ ಅನವರತ ಶ್ರಮಿಸಬೇಕಿದೆ. ಈ ಶ್ರಮಕ್ಕೆ ಎಷ್ಟು ನಮನ ಸಲ್ಲಿಸಿದರೂ ಸಾಲದು. ಇಡೀ ದೇಶವೇ ತಮ್ಮೊಂದಿಗೆ ಇದೆ ಎಂಬ ಭಾವ ತುಂಬಲು ಚಪ್ಪಾಳೆ ತಟ್ಟಿ, ದೀಪ ಹಚ್ಚಿಟ್ಟು, ಹೂಮಳೆಗರೆದಾಯಿತು.
ಇಷ್ಟೇ ಸಾಲದು ಎಂಬಂತೆ ಅನೇಕರು ತಮ್ಮದೇ ರೀತಿಯಲ್ಲಿ ಧನ್ಯತೆ ಸಮರ್ಪಿಸುತ್ತಿದ್ದಾರೆ. ಚಿತ್ರಕಲೆ, ಸಂಗೀತ, ನೃತ್ಯಾದಿಗಳ ಮೂಲಕ ಕೃತಜ್ಞತೆ ಅರ್ಪಿಸುತ್ತಿದ್ದಾರೆ. ಇಂಡೋ – ಟಿಬೆಟಿಯನ್ ಗಡಿ ಭದ್ರತಾ ಪಡೆಯ ಕಾನ್ ಸ್ಟೇಬಲ್ ವಿಕ್ರಮ್ ಜೀತ್ ಸಿಂಗ್ ಅವರು ಕೊರೋನಾ ಕಲಿಗಳಿಗಾಗಿ ಹಾಡೊಂದನ್ನು ಹಾಡಿದ್ದು, ಟ್ವಿಟ್ಟರ್ ಅಲ್ಲಿ ಸಂಚಲನ ಸೃಷ್ಟಿಸಿದೆ.