ನವದೆಹಲಿ: ಕೃಷಿ ತಿದ್ದುಪಡಿ ಕಾಯ್ದೆ ವಿರೋಧಿಸಿ ದೆಹಲಿ ಹಾಗೂ ಬೆಂಗಳೂರಿನಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆ ತಾರಕಕ್ಕೇರಿದ್ದು, ಟ್ರ್ಯಾಕ್ಟರ್ ರ್ಯಾಲಿಗೆ ಮುಂದಾಗಿರುವ ರೈತರ ಮೇಲೆ ಲಾಠಿ ಚಾರ್ಜ್ ಹಾಗೂ ಅಶ್ರುವಾಯು ಪ್ರಯೋಗ ಮಾಡಿ ರೈತರನ್ನು ಚೆದುರಿಸಲು ಪೊಲೀಸರು ಯತ್ನಿಸಿದ್ದಾರೆ.
ದೆಹಲಿಯ ಸಿಂಘು ಗಡಿ ಹಾಗೂ ಗಾಜಿಪುರ ಗಡಿಯಲ್ಲಿ ರೈತರ ಹೋರಾಟ ಭುಗಿಲೆದ್ದಿದ್ದು, ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಕೃಷಿ ಕಾಯ್ದೆ ವಿರೋಧಿಸಿ ದೆಹಲಿ ನಗರ ಪ್ರವೇಶಿಸಲು ಟ್ರ್ಯಾಕ್ಟರ್ ಮೂಲಕ ಆಗಮಿಸಿದ ರೈತರನ್ನು ತಡೆದ ಪೊಲೀಸರು ಸಿಂಘು ಗಡಿಯಲ್ಲಿ ರೈತರ ಮೇಲೆ ಜಲಫಿರಂಗಿ ಪ್ರಯೋಗ ಮಾಡಿದ್ದಾರೆ. ಇನ್ನೊಂದೆಡೆ ರೈತರು ಹಾಗೂ ಪೊಲೀಸರ ನಡುವೆ ವಾಗ್ವಾದ ನಡೆದಿದೆ.
ಇನ್ನು ದೆಹಲಿಯ ಸಿಂಘು ಗಡಿಯಲ್ಲಿ ಟ್ರ್ಯಾಕ್ಟರ್ ರ್ಯಾಲಿ ನಡೆಸಿರುವ 45 ಸಾವಿರಕ್ಕೂ ಹೆಚ್ಚು ರೈತರು ಟ್ರ್ಯಾಕ್ಟರ್, ಕುದುರೆ, ಜೆಸಿಬಿ ಸಮೇತ ದೆಹಲಿ ಪ್ರವೇಶಿಸಲು ಮುಂದಾಗಿದ್ದಾರೆ. ಈ ವೇಳೆ ಬ್ಯಾರಿಕೇಡ್ ಗಳನ್ನು ಹಾಕಿ ರಸ್ತೆ ಮಧ್ಯೆಯೇ ರೈತರನ್ನು ತಡೆಯಲು ಪೊಲೀಸರು ಮುಂದಾಗಿದ್ದಾರೆ. ಇದರಿಂದ ರೊಚ್ಚಿಗೆದ್ದ ರೈತರು ಬ್ಯಾರಿಕೇಡ್ ಗಳನ್ನು ತೆರವುಗೊಳಿಸಿ ಮುನ್ನುಗ್ಗಿದ್ದಾರೆ. ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಲಾಠಿಚಾರ್ಜ್ ನಡೆಸಿದ್ದಾರೆ.