ಕೇಂದ್ರ ಸರ್ಕಾರ ಕೃಷಿ ಕ್ಷೇತ್ರದಲ್ಲಿ ತಂದಿರುವ ಮೂರು ನೂತನ ಕಾಯಿದೆಗಳನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ಪಂಜಾಬ್, ಹರಿಯಾಣಾ ಹಾಗೂ ಉತ್ತರ ಪ್ರದೇಶದ ರೈತರು ದೆಹಲಿಯ ವಿವಿಧ ದಿಕ್ಕುಗಳಲ್ಲಿರುವ ಗಡಿಗಳಲ್ಲಿ ಬೀಡು ಬಿಟ್ಟಿದ್ದಾರೆ.
ಚಳಿಗಾಲವಾದ ಕಾರಣ ಕಳೆದ ಕೆಲ ದಿನಗಳಿಂದ ತಾಪಮಾನ ತೀರಾ ಕಡಿಮೆ ಮಟ್ಟ ತಲುಪಿದ್ದು ಜೊತೆಯಲ್ಲಿ ಬೀಳುತ್ತಿರುವ ಮಳೆಯ ಕಾರಣದಿಂದ ರೈತರಿಗೆ ಪ್ರತಿಭಟನೆ ನಡೆಸಲು ವಾತಾವರಣವೇ ಸವಾಲೆಸೆಯುತ್ತಿದೆ. ಪ್ರತಿಭಟನೆಗಳು ನಡೆಯುತ್ತಿರುವ ಜಾಗಗಳಲ್ಲಿ ಮಳೆ ನೀರು ನಿಂತುಕೊಳ್ಳುತ್ತಿದೆ.
ಪ್ರತಿಭಟನಾನಿರತ ರೈತರಿಗೆ ದೇಶಾದ್ಯಂತ ನಾನಾ ಭಾಗಗಳಿಂದ ನೆರವು ಹರಿದು ಬರುತ್ತಿದ್ದು, ಇದೀಗ ದೆಹಲಿಯಲ್ಲಿರುವ ಕಾಶ್ಮೀರ ಮೂಲದ ಎನ್‌ಜಿಓ ಒಂದು ಅನ್ನದಾತರಿಗೆ ಕಾಂಗ್ರಿ ಬುಟ್ಟಿಗಳನ್ನು ಕಾಶ್ಮೀರದಿಂದ ತರಿಸಿಕೊಟ್ಟಿದೆ. ಈ ಕಾಂಗ್ರಿ ಬುಟ್ಟಿಗಳಲ್ಲಿ ಕಲ್ಲಿದ್ದಲು ಹಾಗೂ ಬೂದಿಯನ್ನು ಇಡುವ ಮೂಲಕ ಚಳಿಗೆ ಮೈ ಕಾಯಿಸಿಕೊಳ್ಳಲು ಸಹಾಯವಾಗುತ್ತದೆ.