ರೈತರ ಪ್ರತಿಭಟನೆಗಳ ಸಂಬಂಧ ಟ್ವಿಟ್‌ಗಳನ್ನು ಮಾಡಲು ಒತ್ತಡಕ್ಕೆ ಒಳಗಾಗಿದ್ದರು ಎಂದು ಬಾಲಿವುಡ್ ಹಾಗೂ ಕ್ರಿಕೆಟ್ ಲೋಕದ ಕೆಲ ಸೆಲೆಬ್ರಿಟಿಗಳ ಮೇಲೆ ಆಪಾದನೆ ಕೇಳಿ ಬಂದ ವಿಚಾರದ ಮೇಲೆ ತನಿಖೆ ನಡೆಸುವುದಾಗಿ ಮಹಾರಾಷ್ಟ್ರ ಸರ್ಕಾರ ತಿಳಿಸಿದೆ.
ಸಚಿನ್ ತೆಂಡೂಲ್ಕರ್, ಗಾಯಕಿ ಲತಾ ಮಂಗೇಶ್ಕರ್ ಸೇರಿದಂತೆ ಅನೇಕ ಸೆಲೆಬ್ರಿಟಿಗಳು ತಂತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಕೇಂದ್ರ ಸರ್ಕಾರಕ್ಕೆ ಬೆಂಬಲ ಸೂಚಿಸಿ, #IndiaTogether ಹಾಗೂ #IndiaAgainstPropaganda ಎಂದು ಅಭಿಯಾನಕ್ಕೆ ಮುಂದಾಗಿದ್ದರು.
ಅಮೆರಿಕದ ಪಾಪ್ ತಾರೆ ರಿಹಾನ್ನಾ ಹಾಗೂ ಹವಾಮಾನ ಕಾರ್ಯಕರ್ತೆ ಗ್ರೇಟಾ ಥನ್‌ಬರ್ಗ್ ರೈತರ ಪ್ರತಿಭಟನೆಗ ಬೆಂಬಲ ಕೊಟ್ಟು ಟ್ವೀಟ್ ಮಾಡಿದ ಬಳಿಕ ಈ ಮೇಲ್ಕಂಡ ಸೆಲೆಬ್ರಿಟಿಗಳು ಟ್ವೀಟ್ ಮಾಡಿದ್ದರು.
ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ಹಾಗೂ ನಟ ಅಕ್ಷಯ್ ಕುಮಾರ್‌ರ ಟ್ವೀಟ್‌ಗಳು ಒಂದೇ ರೀತಿ ಇರುವ ವಿಚಾರ ಒತ್ತಿ ಹೇಳಿದ ಮಹಾರಾಷ್ಟ್ರ ಗೃಹ ಸಚಿವ ಅನಿಲ್ ದೇಶ್‌ಮುಖ್, ರಾಜ್ಯ ಗುಪ್ತಚರ ಇಲಾಖೆಯು ಈ ಸಂಬಂಧ ತನಿಖೆ ನಡೆಸಲಿದೆ ಎಂದಿದ್ದಾರೆ.
ಸೆಲೆಬ್ರಿಟಿಗಳು ಹಾಕಿದ ಈ ಟ್ವಿಟ್‌ಗಳ ಹಿಂದೆ ಬಿಜೆಪಿಯ ಕೈವಾಡ ಇರುವ ಸಾಧ್ಯತೆ ಇದೆ ಎಂದ ಕಾಂಗ್ರೆಸ್ ನಾಯಕ ಸಚಿನ್ ಸಾವಂತ್, “ರಿಹಾನ್ನಾ ಟ್ವಿಟ್‌ಗೆ ಕೇಂದ್ರ ವಿದೇಶಾಂಗ ಸಚಿವಾಲಯ ಪ್ರತಿಕ್ರಿಯಿಸಿದ ಬಳಿಕ ಟ್ವೀಟ್‌ಗಳ ಸರಣಿಯೇ ಹರಿದು ಬಂದಿದೆ. ಪ್ರತಿಯೊಬ್ಬರಿಗೂ ತಮ್ಮದೇ ಆದ ಅಭಿಪ್ರಾಯಗಳನ್ನು ಹೊಂದಲು ಹಕ್ಕಿದೆ. ಆದರೆ ಈ ವಿಚಾರದಲ್ಲಿ ಬಿಜೆಪಿಯ ಪಾತ್ರವಿದೆ ಎಂಬ ಅನುಮಾನ ಇದೆ” ಎಂದು ತಿಳಿಸಿದ್ದಾರೆ.