ಚಂಡೀಗಢ: ಕೇಂದ್ರ ಸರ್ಕಾರ ಜಾರಿಗೆ ತಂದ ಹೊಸ ಕೃಷಿ ಕಾನೂನುಗಳನ್ನು ವಿರೋಧಿಸಿ ವಿವಿಧ ರೈತಸಂಘಟನೆಗಳು ನವೆಂಬರ್ 5 ರಂದು ರಾಷ್ಟ್ರವ್ಯಾಪಿ ರಸ್ತೆ ತಡೆ ಹೋರಾಟ ಕೈಗೊಂಡಿವೆ.
ನವದೆಹಲಿಯಲ್ಲಿ ನಡೆದ ಸಭೆಯಲ್ಲಿ ರೈತ ವಿರೋಧಿ, ಜನವಿರೋಧಿ ಕೃಷಿ ಕಾನೂನುಗಳನ್ನು ಮತ್ತು ಕೇಂದ್ರದ ಪ್ರಸ್ತಾವಿತ ವಿದ್ಯುತ್ ತಿದ್ದುಪಡಿ ಮಸೂದೆ ವಿರುದ್ಧ ಹೋರಾಟ ಮುಂದುವರೆಸಲು ತೀರ್ಮಾನಿಸಲಾಗಿದೆ.
ವಿವಿಧ ರೈತ ಸಂಘಟನೆಗಳ ಸಂಪೂರ್ಣ ಸಮನ್ವಯತೆಯೊಂದಿಗೆ ನವೆಂಬರ್ 5 ರಂದು ದೇಶವ್ಯಾಪಿ ರಸ್ತೆತಡೆ ನಡೆಸಲು ತೀರ್ಮಾನಿಸಲಾಗಿದೆ. ಅಖಿಲ ಭಾರತ ಕಿಸಾನ್ ಸಂಘರ್ಷ ಸಮನ್ವಯ ಸಮಿತಿ ಮತ್ತು ಆಯಾ ರಾಜ್ಯಗಳ ರೈತ ಸಂಘಟನೆಗಳ ಪ್ರತಿನಿಧಿಗಳು ಭಾಗಿಯಾಗಿದ್ದರು.
ಸಮನ್ವಯ ಸಮಿತಿಯ ಸಮಿತಿಯಲ್ಲಿ ರೈತ ಮುಖಂಡರಾದ ಬಲ್ವೀರ್ ಸಿಂಗ್ ರಾಜೇವಾಲ್, ವಿ.ಎಂ. ಸಿಂಗ್, ಗುರ್ನಮ್ ಸಿಂಗ್, ರಾಜು ಶೆಟ್ಟಿ ಮತ್ತು ಯೋಗೇಂದ್ರ ಯಾದವ್ ಅವರಿದ್ದಾರೆ.
500 ಕ್ಕೂ ಹೆಚ್ಚು ಸಂಘಟನೆಗಳನ್ನು ಹೊಂದಿರುವ ಪ್ರಮುಖ ರೈತ ಒಕ್ಕೂಟಗಳು ದೆಹಲಿಯಲ್ಲಿ ಸಭೆ ಸೇರಿ ಚರ್ಚೆ ನಡೆಸಿದ್ದಾರೆ. ನವೆಂಬರ್ 5 ರಂದು ದೇಶವ್ಯಾಪಿ ರಸ್ತೆತಡೆ ನಡೆಸಲಾಗುವುದು. ನವೆಂಬರ್ 26, 27 ರಂದು ದೆಹಲಿ ಚಲೋ ಪ್ರತಿಭಟನೆ ನಡೆಸಲಿದ್ದು, ಕೇಂದ್ರ ಸರ್ಕಾರದ ಕಚೇರಿಗಳು, ಆಡಳಿತರೂಢ ಬಿಜೆಪಿ ನಾಯಕರ ಕಚೇರಿಗಳು ಮತ್ತು ಮಿತ್ರಪಕ್ಷಗಳ ನಾಯಕರ ಕಚೇರಿಗಳ ಮುಂದೆ ಪ್ರತಿಭಟನೆ ನಡೆಸಲು ತಿಳಿಸಲಾಗಿದೆ.