ತಿಂಗಳುಗಟ್ಟಲೇ ಬೆವರು ಸುರಿಸಿ ತೆಗೆದ ಹೂಕೋಸಿನ ಫಸಲಿಗೆ ಕೇವಲ 75 ಪೈಸೆ/ಕೆಜಿ ಬೆಲೆ ಸಿಕ್ಕಾಗ ಮನನೊಂದ ಪಂಜಾಬಿನ ಅಮೃತಸರದ ರೈತರೊಬ್ಬರು ತಾವು ತಂದಿದ್ದ ತರಕಾರಿ ಲಾಟನ್ನೇ ನಾಶ ಮಾಡಿದ್ದಾರೆ.
ದೆಹಲಿಯ ರಸ್ತೆಗಳನ್ನು ಬ್ಲಾಕ್ ಮಾಡಿರುವ ಕಾರಣದಿಂದಾಗಿ, ಅಮೃತಸರ ಹಾಗೂ ಸುತ್ತಲಿನ ಜಿಲ್ಲೆಗಳಲ್ಲಿ ತರಕಾರಿ ಬೆಲೆಗಳು ಪಾತಾಳಕ್ಕೆ ಇಳಿದಿವೆ. ಹೀಗಾಗಿ ರೈತರು ತಮ್ಮ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಕೊಡುವಂತೆ ಆಗ್ರಹಿಸಿ ಬೆಳೆದು ನಿಂತ ಫಸಲನ್ನೇ ಉತ್ತು ನಾಶ ಮಾಡುವಂತೆ ಪರಿಸ್ಥಿತಿ ಉಂಟಾಗಿದೆ.
ಸಾರಾಯ್ ಎಂಬ ಊರಿನ ರೈತ ಅಜಿತ್ ಸಿಂಗ್ ತಮ್ಮ ಒಂದು ಎಕರೆ ಜಮೀನಿನಲ್ಲಿ ಬೆಳೆದಿದ್ದ ಹೂಕೋಸಿನ ಫಸಲೆಲ್ಲವನ್ನೂ ನಾಶ ಮಾಡಿದ್ದಾರೆ. ಹೂಕೋಸಿನ ಬೀಜ, ರಸಗೊಬ್ಬರ ಹಾಗೂ ಒಂದು ಎಕರೆ ಜಮೀನನ್ನು ಉತ್ತಿ ಹದ ಮಾಡಲೆಂದೇ 30-40 ಸಾವಿರ ರೂ.ಗಳನ್ನು ವ್ಯಯ ಮಾಡಿದ್ದು, ಕನಿಷ್ಠ ಒಂದು ಲಕ್ಷ ರೂ.ಗಳ ಲಾಭ ಮಾಡುವ ಅಂದಾಜಿಟ್ಟುಕೊಂಡಿದ್ದಾಗಿ ಅಜಿತ್ ಸಿಂಗ್ ತಿಳಿಸಿದ್ದಾರೆ.
ಕರ್ನಾಟಕದಲ್ಲೂ ಸಹ ಕರ್ಬೂಜ ಹಾಗೂ ಟೊಮ್ಯಾಟೋ ಬೆಳೆಗಾರರು ತಮ್ಮ ಫಸಲಿಗೆ ಸೂಕ್ತ ಬೆಲೆ ಸಿಗದೇ ಬೆಳೆದು ನಿಂತ ಫಸಲನ್ನು ಹೊಲಗಳಲ್ಲೇ ಕೊಳೆಯಲು ಬಿಡುವಂತೆ ಆಗಿದೆ.