ವಿಶ್ವದ ಅತಿ ಹೆಚ್ಚು ಆತ್ಮಹತ್ಯೆ ಪ್ರಕರಣಗಳು ಭಾರತದಲ್ಲೇ ಆಗುತ್ತಿದ್ದು, 2019 ರಲ್ಲಿ 1.5 ಲಕ್ಷ ಆತ್ಮಹತ್ಯೆ ಪ್ರಕರಣಗಳು ದಾಖಲಾಗಿವೆ.
ಇತ್ತೀಚೆಗೆ ಬಿಡುಗಡೆಗೊಂಡ ರಾಷ್ಟ್ರೀಯ ಅಪರಾಧ ದಾಖಲೆಗಳ ವಿಭಾಗ (ಎನ್ ಸಿ ಆರ್ ಬಿ) ವರದಿ ಪ್ರಕಾರ 2019 ರಲ್ಲಿ 1,39,123 ಆತ್ಮಹತ್ಯೆ ಪ್ರಕರಣಗಳು ವರದಿಯಾಗಿವೆ. 2018 ಕ್ಕೆ ಹೋಲಿಸಿದರೆ ಶೇ.3.4 ರಷ್ಟು ಆತ್ಮಹತ್ಯೆ ಹೆಚ್ಚಾಗಿದೆ.
2019 ರಲ್ಲಿ ವರದಿಯಾಗಿರುವ ಆತ್ಮಹತ್ಯೆ ಪ್ರಕರಣಗಳ ಪೈಕಿ ಶೇ.32.4 ರಷ್ಟು ಕೌಟುಂಬಿಕ ಕಲಹದ ಹಿನ್ನೆಲೆಯುಳ್ಳದ್ದೇ ಆಗಿವೆ. ಉಳಿದಂತೆ ಕಾಯಿಲೆ (ಶೇ.17.1), ಮಾದಕವ್ಯಸನ (ಶೇ.5.6), ವಿವಾಹ ಸಂಬಂಧಿತ ಪ್ರಕರಣ (ಶೇ.5.5), ಪ್ರೇಮ ಸಂಬಂಧ (ಶೇ.4.5), ಸಾಲಬಾಧೆ (ಶೇ.4.2), ಪರೀಕ್ಷೆಯಲ್ಲಿ ಅನುತ್ತೀರ್ಣ ಹಾಗೂ ನಿರುದ್ಯೋಗ ಸಮಸ್ಯೆಯಿಂದ ಆತ್ಮಹತ್ಯೆ ಮಾಡಿಕೊಂಡವರ ಪ್ರಮಾಣವು ಶೇ.2.0 ರಷ್ಟಿದೆ.
ಇದಲ್ಲದೆ, ವೃತ್ತಿಪರ ಸಮಸ್ಯೆಗಳಿಂದ ಶೇ.1.2 ಮತ್ತು ಆಸ್ತಿ ವಿವಾದದಿಂದಾಗಿ ಶೇ.1.1 ರಷ್ಟು ಆತ್ಮಹತ್ಯೆಗಳಾಗಿವೆ. ದುಡಿಯುವ ಪುರುಷರ ಆತ್ಮಹತ್ಯೆ ಪ್ರಮಾಣವೇ ಹೆಚ್ಚಾಗಿದೆ. ಶೇ.23.4 ರಷ್ಟು ದಿನಗೂಲಿ ನೌಕರರು ಆತ್ಮಹತ್ಯೆಕ್ಕೀಡಾಗಿದ್ದು, ದೇಶದಲ್ಲಿರುವ ಒಟ್ಟಾರೆ ನಿರುದ್ಯೋಗಿಗಳ ಪೈಕಿ ಶೇ.10.1 ರಷ್ಟು ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಎನ್ ಸಿ ಆರ್ ಬಿ ವರದಿ ಪ್ರಕಾರ 25 ವರ್ಷದಲ್ಲಿ ನಿರುದ್ಯೋಗಿಗಳ ಆತ್ಮಹತ್ಯೆ ಪ್ರಮಾಣವು ಎರಡಂಕಿ ದಾಟಿದ್ದು ಇದೇ ಮೊದಲು.
ಆತ್ಮಹತ್ಯೆ ವಿಚಾರದಲ್ಲಿ ರಾಷ್ಟ್ರೀಯ ಸರಾಸರಿಯು ಶೇ.10.4 ರಷ್ಟಿದ್ದು, ಸಿಕ್ಕಿಂನಲ್ಲಿ ಶೇ.33.1 ರಷ್ಟು ಆತ್ಮಹತ್ಯೆಗಳಾಗಿವೆಯಲ್ಲದೆ, ಕೇಂದ್ರಾಡಳಿತ ಪ್ರದೇಶಗಳಲ್ಲೇ ಹೆಚ್ಚು ಪ್ರಕರಣ ದಾಖಲಾಗಿದೆ.