ನವದೆಹಲಿ: ದೇಶದಲ್ಲಿ ಕೊರೊನಾ, ಕೈಗಾರಿಕೆ, ಕೃಷಿ ವಿಪತ್ತು ಉಂಟಾಗಿರುವ ಸಮಯದಲ್ಲಿ ದೇಶದ ಪ್ರಧಾನಿ ನರೇಂದ್ರ ಮೋದಿ ದೊಡ್ಡ ಉದ್ಯಮಿಗಳ ಜತೆ ಹುಟ್ಟು ಹಬ್ಬ ಆಚರಿಸಿಕೊಂಡಿದ್ದಾರೆ ಎಂಬ ಸಂದೇಶವಿರುವ ವಿಡಿಯೋ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಫೇಸ್ ಬುಕ್ ನಲ್ಲಿ ಫೋಟೋಗಳನ್ನು ಸಾವಿರಾರು ಜನ ಹಂಚಿಕೊಂಡಿದ್ದಾರೆ.
ಆದರೆ, ಈ ವಿಡಿಯೋ ಫೋಟೋಗಳು ಸಂಪೂರ್ಣ ಸುಳ್ಳು ಎಂಬುದು ಫ್ಯಾಕ್ಟ್ ಚೆಕ್ ನಲ್ಲಿ ಗೊತ್ತಾಗಿದೆ. 2017 ರಲ್ಲಿ ನರೇಂದ್ರ ಮೋದಿ ಇಸ್ರೇಲ್ ಗೆ ಭೇಟಿ ನೀಡಿದ ಸಂದರ್ಭದಲ್ಲಿ ಮೋದಿ ಅಲ್ಲಿನ ಪ್ರಧಾನಿ ಬೆಂಜಮಿನ್ ನೆತಾನ್ಯಾಹು ಅವರೊಂದಿಗಿದ್ದ ವಿಡಿಯೋಗಳನ್ನು ಈ ವರ್ಷದ್ದು ಎಂದು ಬಳಸಲಾಗುತ್ತಿದೆ.
“ನಮ್ಮ ದೇಶದಲ್ಲಿ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಗಡಿಯಲ್ಲಿ ಸೈನಿಕರು ಸಾಯುತ್ತಿದ್ದಾರೆ. ಕೋವಿಡ್ ಮಹಾಮಾರಿಯಲ್ಲಿ ದೇಶ ವಿಶ್ವದಲ್ಲೇ ನಂಬರ್ ಒನ್ ಪಟ್ಟವೇರುವತ್ತ ಸಾಗಿದೆ. ಲಕ್ಷಾಂತರ ಯುವಕರು ಉದ್ಯೋಗ ಕಳೆದುಕೊಂಡಿದ್ದಾರೆ. ಆದರೆ, ದೇಶದ ಪ್ರಧಾನಿ ಮೋದಿ ಇಂಡಸ್ಟ್ರಿಯಲಿಸ್ಟ್ ಗಳ ಜತೆ ಹುಟ್ಟು ಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ.” ಎಂದು ಈಗ ಹರಿ ಬಿಡಲಾಗಿರುವ ಸುಳ್ಳು ವಿಡಿಯೋದಲ್ಲಿ ಕ್ಯಾಪ್ಶನ್ ನೀಡಲಾಗಿದೆ.