ವಾರಣಾಸಿ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಎಪಿಎಂಸಿ ಕಾಯ್ದೆ ತಿದ್ದುಪಡಿ ವಿರುದ್ಧ ದೇಶಾದ್ಯಂತ ರೈತರಿಂದ ಪ್ರತಿಭಟನೆ ನಡೆದಿದೆ. “ರೈತರ ಹೆಸರಿನಲ್ಲಿ ಪ್ರತಿಭಟನೆ ನಡೆಸುತ್ತಿರುವ ಗೂಂಡಾಗಳು ವಾರಣಾಸಿ ತರಕಾರಿ ಮಾರುಕಟ್ಟೆಯನ್ನು ಧ್ವಂಸ ಮಾಡಿದ್ದಾರೆ. ಬಡ ವ್ಯಾಪಾರಸ್ಥರ ಹೊಟ್ಟೆಯ ಮೇಲೆ ಹೊಡೆದಿದ್ದಾರೆ ಎಂಬ ಸಂದೇಶವಿರುವ ಫೋಟೋವೊಂದು ಜಾಲತಾಣಗಳಲ್ಲಿ ಭರ್ಜರಿ ವೈರಲ್ ಆಗಿತ್ತು. ಆದರೆ, ಫೋಟೋದ ಅಸಲಿಯತ್ತು ಬೇರೆಯೇ ಎಂಬುದು ಫ್ಯಾಕ್ಟ್ ಚೆಕ್ ನಲ್ಲಿ ಪತ್ತೆಯಾಗಿದೆ.
ಈ ಫೋಟೋ ಟ್ವಿಟರ್ ಹಾಗೂ ಫೇಸ್ ಬುಕ್ ನಲ್ಲಿ ಡಿಸೆಂಬರ್ 8 ರಂದು ಅಪ್ಲೋಡ್ ಆಗಿತ್ತು. ಫೇಸ್ಬುಕ್ ನಲ್ಲಿ 2600 ಕ್ಕೂ ಅಧಿಕ ಬಾರಿ ಶೇರ್ ಆಗಿ ಸಂಚಲನ ಮೂಡಿಸಿತ್ತು. ಪ್ರತಿಭಟನಾಕಾರರ ವಿರುದ್ಧ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗಿತ್ತು.
ಗೂಗಲ್ ನಲ್ಲಿ ನೋಡಿದಾಗ ಫೋಟೋ ಪಶ್ಚಿಮ ಬಂಗಾಳದ ಬರಾಸತ್ ನದ್ದು ಎಂದು ತೋರಿಸಿತ್ತು. ಇನ್ನಷ್ಟು ಹುಡುಕಿದಾಗ ಫೋಟೋದ ಮೂಲ ಖಚಿತವಾಗಿದೆ. ಅದರಲ್ಲಿರುವ ವಾಹನವೊಂದರ ಮೇಲೆ ಡಬ್ಲ್ಯುಬಿ ಎಂಬ ನೋಂದಣಿ ಸಂಖ್ಯೆ ಇತ್ತು. ಅದರ ಆಧಾರದ ಮೇಲೆ ಫೋಟೋ ವಾರಣಾಸಿಯದ್ದಲ್ಲ ಎಂಬುದು ತಿಳಿದು ಬಂದಿದೆ.
ಪಶ್ಚಿಮ ಬಂಗಾಳದ ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ಮುಖಂಡ ಸುರೇಂದ್ರ ರಜಪೂತ್ ಮೇ 5 ರಂದು ಫೋಟೋವನ್ನು ಟ್ವಿಟ್ಟರ್ ನಲ್ಲಿ ಅಪ್ಲೋಡ್ ಮಾಡಿದ್ದರು. ಕೊರೊನಾ ಲಾಕ್ ಡೌನ್ ಸಮಯದಲ್ಲಿ ಪೊಲೀಸರ ರಕ್ಷಣೆಯಲ್ಲಿ ಸಾರಾಯಿ ಅಂಗಡಿ ತೆರೆಯಲಾಗುತ್ತಿದೆ. ತರಕಾರಿ ಅಂಗಡಿಗಳನ್ನು ಧ್ವಂಸ ಮಾಡಲಾಗುತ್ತಿದೆ ಎಂದು ಅವರು ಬೆಂಗಾಲಿ ಭಾಷೆಯಲ್ಲಿ ಕ್ಯಾಪ್ಶನ್ ನೀಡಿದ್ದರು.