ಐದು ವರ್ಷದ ಹಿಂದೆ ಕುಟುಂಬದಿಂದ ಬೇರ್ಪಟ್ಟ ಬಾಲಕ ಪುನಃ ಈಗ ಅಚ್ಚರಿ ರೀತಿಯಲ್ಲಿ ತನ್ನ ಕುಟುಂಬದೊಂದಿಗೆ ಸೇರಿಕೊಂಡಿದ್ದಾನೆ, ಇದಕ್ಕೆ ಕಾರಣವಾಗಿದ್ದು ಫೇಸ್ ರೆಕಾಗ್ನಿಶನ್ ಸಾಫ್ಟ್ವೇರ್ ಎಂಬುದು ವಿಶೇಷ ಸಂಗತಿ.
ಐದು ವರ್ಷಗಳ ಹಿಂದೆ ನಾಪತ್ತೆಯಾಗಿದ್ದ ಹದಿಮೂರು ವರ್ಷದ ಸೋಮ್ ನಿಗಮ್ ಎಂಬ ಉತ್ತರ ಪ್ರದೇಶದ ಬಾಲಕನನ್ನು ಅಸ್ಸಾಂನ ಮಕ್ಕಳ ರಕ್ಷಣಾ ಕೇಂದ್ರದಲ್ಲಿ ಪತ್ತೆ ಹಚ್ಚಿದ ಪೊಲೀಸರು, ಬಳಿಕ ಕುಟುಂಬ ಸೇರುವಂತೆ ಮಾಡಿದರು.
ಐದು ವರ್ಷದ ಬಳಿಕ ಸಿಕ್ಕ ಮಗನನ್ನು ತಂದೆ-ತಾಯಿ ತಬ್ಬಿಕೊಂಡು ಆನಂದಭಾಷ್ಪ ಸುರಿಸುವ ವಿಡಿಯೋ ಇದೀಗ ವೈರಲ್ ಆಗಿದೆ.
2015 ರ ಜುಲೈ 14ರಂದು ಸೋಮ್ ನಾಪತ್ತೆಯಾಗಿದ್ದ. ಒಂದು ವಾರದ ಬಳಿಕ ಅಸ್ಸಾಂನ ಗೋಲಾಪಾರದಲ್ಲಿ ಪತ್ತೆಯಾಗಿದ್ದ. ಬಳಿಕ ಆತನನ್ನು ಮಕ್ಕಳ ರಕ್ಷಣಾ ಕೇಂದ್ರಕ್ಕೆ ದಾಖಲಿಸಲಾಗಿತ್ತು.
ದೇಶಾದ್ಯಂತ ಇರುವ ಮಕ್ಕಳ ರಕ್ಷಣಾ ಕೇಂದ್ರದಲ್ಲಿನ ಮಕ್ಕಳ ಡೇಟಾಬೇಸ್ ಅನ್ನು ದರ್ಪಣ ಪೋರ್ಟಲ್ ಮೂಲಕ ನಿರ್ವಹಿಸಲಾಗುತ್ತದೆ. ಮಕ್ಕಳ ನಾಪತ್ತೆ ಪ್ರಕರಣದಲ್ಲಿ ದಾಖಲಾದ ಎಫ್ಐಆರ್ ಮತ್ತು ಅಲ್ಲಿ ಪಡೆದ ಮಕ್ಕಳ ಫೋಟೋವನ್ನು ಈ ಡೇಟಾಬೇಸ್‌ನಲ್ಲಿ ಹೋಲಿಕೆ ಮಾಡಲಾಗುತ್ತದೆ. ಈ ವೇಳೆ ಫೇಸ್ ಮ್ಯಾಟ್ರಿಕ್ಸ್ ಬಳಸುವ ಕಾರಣ ಹಲವು ವರ್ಷಗಳ ನಂತರವೂ ನಿಖರತೆ ಕಂಡುಕೊಳ್ಳಲು ಸಾಧ್ಯವಾಗುತ್ತದೆ ಎಂದು ಪೊಲೀಸರು ಹೇಳಿದ್ದಾರೆ.
ಈವರೆಗೆ ಮೂವತ್ತಕ್ಕೂ ಹೆಚ್ಚು ಪ್ರಕರಣದಲ್ಲಿ ಮಕ್ಕಳನ್ನು ಕುಟುಂಬಕ್ಕೆ ಸೇರಿಸಲಾಗಿದೆ. ಈ ಪ್ರಕರಣ ತೆಲಂಗಾಣ ಪೊಲೀಸರ ಗಮನಕ್ಕೆ ಬಂದಿದ್ದು ಸಂಬಂಧಪಟ್ಟವರ ಗಮನಕ್ಕೆ ತಂದಿದ್ದಾರೆ. ತಕ್ಷಣವೇ ಕುಟುಂಬಸ್ಥರು ಅಸ್ಸಾಂಗೆ ತೆರಳಿ ತಮ್ಮ ಮಗನನ್ನು ಗುರುತಿಸಿದರು.