ವಿಜಯವಾಡ: ಆಂಧ್ರ ಪ್ರದೇಶದ ಶಾಲೆಗಳ ವಿದ್ಯಾರ್ಥಿ ಹಾಜರಾತಿ ಪುಸ್ತಕದಲ್ಲಿ ಇನ್ನು ಜಾತಿ ಹಾಗೂ ಧರ್ಮದ ಹೆಸರು ನಮೂದಿಸುವಂತಿಲ್ಲ ಎಂದು ಶಿಕ್ಷಣ ಇಲಾಖೆ ಆಯುಕ್ತ ಚೀನಾ ವೀರಭದ್ರುಡು ಇತ್ತೀಚೆಗೆ ಆದೇಶ ಮಾಡಿದ್ದಾರೆ.
ಆಯುಕ್ತರ ಈ ಆದೇಶವನ್ನು ಶಿಕ್ಷಣ ತಜ್ಞರು, ಪಾಲಕರು, ವಿದ್ಯಾರ್ಥಿಗಳು ಸ್ವಾಗತಿಸಿದ್ದಾರೆ. ಕೆಲವು ಶಾಲೆಗಳ ಹಾಜರಾತಿ ಪುಸ್ತಕದಲ್ಲಿ ವಿದ್ಯಾರ್ಥಿಗಳ ಜಾತಿಯನ್ನು ಹಾಗೂ ಹೆಣ್ಣು ಮಕ್ಕಳ ಹೆಸರನ್ನು ಕೆಂಪು ಅಕ್ಷರದಲ್ಲಿ ನಮೂದಿಸಿರುವುದನ್ನು ಗಮನಿಸಲಾಗಿದೆ. ಇನ್ನು ಹಾಜರಾತಿ ಪುಸ್ತಕದಲ್ಲಿ ಸಮಾನತೆ ಇರಬೇಕು ಎಂದು ಆದೇಶದಲ್ಲಿ ಸೂಚಿಸಲಾಗಿದೆ.
“ಹಾಜರಾತಿ ಪುಸ್ತಕದಲ್ಲಿ ಜಾತಿ ನಮೂದಿಸುವುದರಿಂದ ಉಂಟಾಗುವ ತೊಂದರೆಯನ್ನು ನಾನು ಶಾಲೆಗೆ ಹೋಗುವಾಗಲೇ ಅನುಭವಿಸಿದ್ದೆ. ಆದರೆ, ಆಗ ನಾನು ಅಸಹಾಯಕನಾಗಿದ್ದೆ. ಈಗಲೂ ಆ ಸಮಸ್ಯೆ ಇರುವ ಬಗ್ಗೆ ಶಾಲೆಗೆ ಭೇಟಿ ನೀಡುವ ಸಂದರ್ಭದಲ್ಲಿ ಕೆಲ ಪಾಲಕರು ಹೇಳಿಕೊಂಡಿದ್ದರು. ನಾನು ಈಗ ಅಧಿಕಾರದಲ್ಲಿದ್ದು, ಈಗಲಾದರೂ ಬದಲಾವಣೆ ತರಬೇಕು ಎಂದು ಈ ಆದೇಶ ಹೊರಡಿಸಿದ್ದೇನೆ” ಎಂದು ವೀರಭದ್ರುಡು ಹೇಳಿದ್ದಾರೆ.