ಮತದಾನೋತ್ತರ ಸಮೀಕ್ಷೆಗಳಿಗೆ ಬ್ರೇಕ್ ಹಾಕಿರುವ ಚುನಾವಣಾ ಆಯೋಗ ಇದೀಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಚಾಪೆ ಕೆಳಗೆ ತೂರುವ ಮಾಧ್ಯಮಗಳಿಗೆ ರಂಗೋಲಿ ಕೆಳಗಿಂದ ಬಂದು ಮಟ್ಟ ಹಾಕಿದೆ.
ಜ್ಯೋತಿಷಿಗಳಿಂದ ಯಾವ ಪಕ್ಷ ಚುನಾವಣೆ ಗೆಲ್ಲಲಿದೆ ಎಂದು ಹೇಳಿಸುವ ನೆವದಲ್ಲಿ ಪರೋಕ್ಷವಾಗಿ ಮತದಾನೋತ್ತರ ಸಮೀಕ್ಷೆ ನಡೆಸುವ ಮಾಧ್ಯಮಗಳ ಖಯಾಲಿಗೆ ಕಾನೂನು ಬದ್ಧವಾದ ನಿಷೇಧ ಹೇರಿಕೆಗೆ ಸಜ್ಜಾಗಿದೆ.
ಮುಂದಿನ ತಿಂಗಳಿನಿಂದ ಮೂರು ಹಂತಗಳಲ್ಲಿ ನಡೆಯಲಿರುವ ಬಿಹಾರ ವಿಧಾನ ಸಭಾ ಚುನಾವಣೆಯ ವೇಳೆ ಮೇಲ್ಕಂಡ ರೀತಿಯ ಯಾವುದೇ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳದಂತೆ ನಿಷೇಧ ಹೇರಿ ಆದೇಶ ಹೊರಡಿಸಿದೆ.
ಈ ಸಂಬಂಧ ಮೊದಲ ಬಾರಿಗೆ ಮಾರ್ಚ್ 2017ರಲ್ಲಿ ಆದೇಶದ ಹೊರಡಿಸಿದ್ದ ಚುನಾವಣಾ ಆಯೋಗ, ಜನಪ್ರತಿನಿಧಿಗಳ ಕಾಯಿದೆಯ 126A ವಿಧಿಯನ್ನು ಪುನರುಚ್ಛರಿಸಿದೆ. “ನಿರ್ವಚನ ಸದನ ಗೊತ್ತುಪಡಿಸಿದ ಅವಧಿಯುದ್ದಕೂ, ಯಾವುದೇ ವ್ಯಕ್ತಿಯು ಮತದಾನೋತ್ತರ ಸಮೀಕ್ಷೆಯನ್ನು ಯಾವುದೇ ರೀತಿಯ ಮುದ್ರಣ ಅಥವಾ ಎಲೆಕ್ಟ್ರಾನಿಕ್ ಮಾಧ್ಯಮದ ಮೂಲಕ ಪ್ರಕಟಿಸುವುದು ಅಥವಾ ಇನ್ಯಾವುದೇ ರೀತಿಯಲ್ಲೂ ಸಹ ಈ ಬಗ್ಗೆ ಸುದ್ದಿಯನ್ನು ಹಬ್ಬಿಸಕೂಡದು…..” ಎಂದು ಈ ವಿಧಿ ತಿಳಿಸುತ್ತದೆ.