ಜಿರಾಫೆ ಎಂದರೆ ಶಾಂತ ಪ್ರಾಣಿ ಎಂದು ನೀವೆಂದುಕೊಂಡಿರಬಹುದು. ಗಂಭೀರವಾಗಿ ತಲೆಯೆತ್ತಿ ನಿಂತು ನಿಧಾನವಾಗಿ ಓಡಾಡಿಕೊಂಡಿರುವ ಈ ಶಾಂತ ಮೂರ್ತಿ ರೌದ್ರಾವತಾರ ತಾಳಿದರೆ ಹೇಗಿರುತ್ತೆ ಗೊತ್ತಾ…?
ಐಎಫ್ಎಸ್ ಅಧಿಕಾರಿ ಸುಧಾ ರಾಮನ್ ಅವರು ಹಂಚಿಕೊಂಡ ವಿಡಿಯೋ ಅದನ್ನು ತೋರಿಸುತ್ತದೆ.
ಜಿರಾಫೆಯೊಂದು ಕಾರನ್ನು ಅಟ್ಟಿಸಿಕೊಂಡು ಬರುವ ರೋಮಾಂಚಕಾರಿ ವಿಡಿಯೋವನ್ನು ಫೇಸ್ ಬುಕ್ ನಲ್ಲಿ ಅವರು ಅಪ್ ಲೋಡ್ ಮಾಡಿದ್ದಾರೆ.
“ಜಿರಾಫೆ ಕಾಲುಗಳು ಎಷ್ಟು ಬಲಿಷ್ಠವಾಗಿವೆ ನೋಡಿ. ಒಂದು ಒದ್ದರೆ, ಅವರ್ಯಾರೂ ಭೂಮಿ ಮೇಲೆ ಇರುವುದಿಲ್ಲ. ಇದನ್ನರಿತ ಜನ ಅದ್ಹೇಗೆ ಓಡಿದ್ದಾರೆ ನೋಡಿ” ಎಂದು ಸುಧಾ ರಾಮನ್ ಬರೆದಿದ್ದಾರೆ.
58 ಸೆಕೆಂಡ್ ನ ವಿಡಿಯೋದಲ್ಲಿ ಜಿರಾಫೆ ಅತಿ ವೇಗವಾಗಿ ಕಾರನ್ನು ಬೆನ್ನಟ್ಟಿ ಬರುತ್ತದೆ. ಕಾರಿನ ಪ್ರಯಾಣಿಕರು ಆತಂಕದಲ್ಲೇ ಅದನ್ನು ನೋಡುತ್ತಿದ್ದಾರೆ. ಚಾಲಕ ಪ್ರಯಾಣಿಕರ ಜೀವ ಉಳಿಸುವ ಕಾರಣಕ್ಕೆ ಹಿಮ್ಮುಖವಾಗಿ ಅತಿ ವೇಗವಾಗಿ ಚಲಿಸುತ್ತಾನೆ. ವಿಡಿಯೋಕ್ಕೆ ಸಾಕಷ್ಟು ಪ್ರತಿಕ್ರಿಯೆಗಳು ಬಂದಿದ್ದು, ಜುರಾಸಿಕ್ ಪಾರ್ಕ್ ಸಿನೆಮಾ ನೆನಪಿಸುತ್ತದೆ ಎಂದು ಕೆಲವರು ಹೇಳಿದ್ದಾರೆ.