
ಹಬ್ಬದ ಋತು ಶುರುವಾಗಿದೆ. ಕೊರೊನಾ ಹಿನ್ನಲೆಯಲ್ಲಿ ಕೇಂದ್ರ ಆರೋಗ್ಯ ಸಚಿವಾಲಯ ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಹೊಸ ಮಾರ್ಗಸೂಚಿಗಳ ಅಡಿಯಲ್ಲಿ, ಕಂಟೈನ್‌ಮೆಂಟ್ ವಲಯದಲ್ಲಿ ಯಾವುದೇ ಹಬ್ಬದ ಕಾರ್ಯಕ್ರಮಗಳನ್ನು ಆಯೋಜಿಸುವಂತಿಲ್ಲ. ಪೂಜೆ, ಜಾತ್ರೆಗಳು, ರ್ಯಾಲಿಗಳು, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ವಿಶೇಷ ಸೂಚನೆಗಳನ್ನು ಸಹ ನೀಡಲಾಗಿದೆ.
ಶೀಘ್ರವೇ ನವರಾತ್ರಿ ಶುರುವಾಗಲಿದೆ. ದೇಶದಾದ್ಯಂತ ನವರಾತ್ರಿ ಪೆಂಡಾಲ್ ಹಾಕಲಾಗುತ್ತದೆ. ಇದಲ್ಲದೆ ಅನೇಕ ಮೇಳ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ಮಾರ್ಗಸೂಚಿಗಳ ಪ್ರಕಾರ, ಧಾರ್ಮಿಕ ಕಾರ್ಯಕ್ರಮಗಳಿಗೆ ಸಂಪೂರ್ಣ ಪ್ಲಾನ್ ಮಾಡಬೇಕಾಗುತ್ತದೆ. ಜನಸಂದಣಿ ಮತ್ತು ಸಾಮಾಜಿಕ ಅಂತರದ ಬಗ್ಗೆ ಗಮನ ನೀಡಬೇಕು. ಸಾಮಾಜಿಕ ಅಂತರಕ್ಕೆ ನೆಲದ ಮೇಲೆ ಮಾರ್ಕ್ ಹಾಕಬೇಕು. ಇಬ್ಬರ ನಡುವೆ 6 ಅಡಿ ಅಂತರವಿರಬೇಕು. ಸ್ಯಾನಿಟೈಜರ್, ಥರ್ಮಲ್ ಸ್ಕ್ಯಾನಿಂಗ್ ವ್ಯವಸ್ಥೆಯಿರಬೇಕು. ಹಾಗೆ ಸಿಸಿ ಟಿವಿ ಅನಿವಾರ್ಯವಾಗಲಿದೆ.
ಧಾರ್ಮಿಕ ಕಾರ್ಯಕ್ರಮಗಳಿಗೆ ಸಾಮಾಜಿಕ ಅಂತರ ಹಾಗೂ ಮಾಸ್ಕ್ ಕಡ್ಡಾಯವಾಗಲಿದೆ. ಧಾರ್ಮಿಕ ರ್ಯಾಲಿಗಳ ಮಾರ್ಗಸೂಚಿಗಳನ್ನು ಮೊದಲೇ ನೀಡಬೇಕು. ಮೂರ್ತಿ ವಿಸರ್ಜನೆ ಸ್ಥಳವನ್ನು ಮೊದಲೇ ನಿಗಧಿಪಡಿಸಬೇಕು. ಕಡಿಮೆ ಜನ ಪಾಲ್ಗೊಳ್ಳುವಂತೆ ನೋಡಿಕೊಳ್ಳಬೇಕು.
ಧಾರ್ಮಿಕ ಸ್ಥಳ ಹಾಗೂ ಪೆಂಡಾಲ್ ಗಳಲ್ಲಿ ಮೂರ್ತಿ ಸ್ಪರ್ಶವನ್ನು ನಿಷೇಧಿಸಲಾಗಿದೆ. ಸಾಮೂಹಿಕ ಗಾಯನ ಕಾರ್ಯಕ್ರಮವನ್ನು ರದ್ದು ಮಾಡಲಾಗಿದೆ. ರೆಕಾರ್ಡ್ ಗಾಯನವನ್ನು ಬಳಸಬೇಕು. ಕಮ್ಯೂನಿಟಿ ಕಿಚನ್ ಬಳಸುವ ವೇಳೆ ಸ್ವಚ್ಛತೆ ಬಗ್ಗೆ ಗಮನ ನೀಡಬೇಕು. ಕಾರ್ಯಕ್ರಮ ಸ್ಥಳದಲ್ಲಿ ಚಪ್ಪಲಿ, ಬೂಟ್ ತೆಗೆಯುವ ಬಗ್ಗೆಯೂ ಮಾರ್ಗಸೂಚಿ ಹೊರಡಿಸಲಾಗಿದೆ.