ಕೊರೋನಾ ಕಾಟದಿಂದ ಹಲವರು ಕೆಲಸ ಕಳೆದುಕೊಳ್ಳುವ ಭೀತಿಯಲ್ಲಿದ್ದು, ಆತ್ಮ ವಿಶ್ವಾಸವೇ ಈಗ ಆಸರೆ ಎನ್ನುವಂತಾಗಿದೆ. ಕೆಲಸ ಅಥವಾ ಸಂಬಳ ಕಳೆದುಕೊಂಡವರು ಖಿನ್ನತೆಗೆ ಒಳಗಾಗಿ ಆತ್ಮಹತ್ಯೆಯ ದಾರಿ ಹಿಡಿಯುವಂತಾಗಬಾರದು. ಸ್ಥೈರ್ಯ ಕಳೆದುಕೊಳ್ಳದೆ ಧೈರ್ಯದಿಂದ ಮುಂದುವರೆಯಬೇಕು ಎಂಬುದಕ್ಕೆ ಉದಾಹರಣೆಯೊಂದು ಇಲ್ಲಿದೆ.
ತಮಿಳುನಾಡಿನ ಮಹೇಶ್ವರನ್ ಎಂಬಾತ, ಕೊಯಮತ್ತೂರಿನ ಖಾಸಗಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಕಂಪ್ಯೂಟರ್ ಸೈನ್ಸ್ ಪ್ರಾಧ್ಯಾಪಕರಾಗಿದ್ದರು. ಆದರೆ, ಕಾಲೇಜು ಬಂದ್ ಆಗಿದ್ದರಿಂದ ವೇತನ ಕೊಡಲಾಗುವುದಿಲ್ಲ ಎಂದು ಆಡಳಿತ ಮಂಡಳಿ ಹೇಳಿತು. 6 ತಿಂಗಳ ಮಗು ಇರುವ 30 ರ ಹರೆಯದ ಮಹೇಶ್ವರನ್ ಹಲವೆಡೆ ಕೆಲಸಕ್ಕೆ ಪ್ರಯತ್ನಿಸಿದರು. ಎಲ್ಲ ಕಡೆಯೂ ಕೊರೋನಾದ್ದೇ ಕಾರಣ.
ಜೀವನ ಸಾಗಿಸಲು ಕೆಲಸ ಬೇಕೇ ಬೇಕು ಎಂದು ನಿರ್ಧಸಿರಿದ ಮಹೇಶ್ವನ್, ತಮ್ಮ ವಿದ್ಯಾರ್ಹತೆಯನ್ನ ಬದಿಗಿಟ್ಟು ಕುರುಕಲು ತಿಂಡಿ ಮಾಡಿ ಮಾರುವ ಕಾಯಕಕ್ಕೆ ಕೈ ಹಾಕಿದ್ದಾರೆ. ವಿದ್ಯೆಗೆ ತಕ್ಕ ಕೆಲಸ, ಸಂಬಳ ಸಿಗದಿದ್ದಾಗ ದುಡಿಮೆ ಒದಗಿಸುವ ಕೆಲಸ ಯಾವುದಾದರೂ ಏನು ? ವಿದ್ಯೆಯೂ ಇದೆ, ಮುರುಕು (ಕುರುಕಲು ತಿಂಡಿ) ಮಾಡಿ ಮಾರುವ ಕೌಶಲ್ಯವೂ ಇದೆ. ಬೇಕಿರುವುದು ಹಣ. ಅದಕ್ಕೊಂದು ಕೆಲಸ. ಯಾವುದಾದರೇನು ಎನ್ನುತ್ತಾರೆ ಮಹೇಶ್ವರನ್.
ಇತ್ತೀಚೆಗಷ್ಟೆ ಕೆಲಸ ಕಳೆದುಕೊಂಡ ಪೈಲಟ್ ಒಬ್ಬರು ದ್ವಿಚಕ್ರ ವಾಹನದಲ್ಲಿ ಊಟ-ತಿಂಡಿ ತಲುಪಿಸುವ ಕೆಲಸ ಮಾಡಿದ ಸುದ್ದಿ ವೈರಲ್ ಆಗಿತ್ತು. ಅಷ್ಟೇ ಏಕೆ, ಬೆಲ್ಜಿಯನ್ ಪಾಪ್ ಹಾಡುಗಾರರೊಬ್ಬರು ಕೆಲಸ ಇಲ್ಲದೆಯೇ ಕಚೇರಿ ಸಹಾಯಕರಾಗಿ ಸೇರಿದ್ದಾರೆ.