
ತನ್ನ ಮಾಲೀಕರಿಂದ ಬಲವಂತವಾಗಿ ಹೆಂಡ ಕುಡಿಸಿಕೊಂಡಿದ್ದ ಆನೆಯೊಂದನ್ನು ಜಾರ್ಖಂಡ್ ಅರಣ್ಯ ಇಲಾಖೆಯ ಸಿಬ್ಬಂದಿ ರಕ್ಷಿಸಿದ್ದಾರೆ. ʼಎಮ್ಮಾ’ ಹೆಸರಿನ 40 ವರ್ಷದ ಈ ಆನೆಗೆ ಬಲವಂತವಾಗಿ ಹೆಂಡ ಕುಡಿಸಿ ಭಿಕ್ಷೆ ಬೇಡಲು ಬಳಸಿಕೊಳ್ಳಲಾಗುತ್ತಿತ್ತು. ಆನೆಯ ಮಾಲೀಕನ ವಿರುದ್ಧ ವನ್ಯಜೀವಿ ಕಾನೂನುಗಳ ಉಲ್ಲಂಘನೆ ಹಾಗೂ ತೀವ್ರ ನಿರ್ಲಕ್ಷ್ಯದ ಆರೋಪ ಪಟ್ಟಿ ಸಿದ್ಧಪಡಿಸಲಾಗಿದೆ.
ಎಮ್ಮಾಳನ್ನು 300 ಮೈಲಿಗಿಂತಲೂ ದೂರದಿಂದ ನಡೆಸಿಕೊಂಡು ಕರೆತರಲಾಗಿದ್ದು, ವರ್ಷಗಳ ಮಟ್ಟಿಗೆ ಚಿತ್ರಹಿಂಸೆ ಕೊಟ್ಟಿರುವ ಕಾರಣ ಆಕೆಗೆ ಆಸ್ಟೆಯೋಆರ್ಥ್ರಿಟಿಸ್ ಸಮಸ್ಯೆ ಎದುರಾಗಿದೆ. ಆಕೆಯ ಕಾಲಿಗೆ ಚೂಪಾದ ಗಾಜಿನ ಚೂರುಗಳು, ಲೋಹಗಳು ಹಾಗೂ ಕಲ್ಲಿನ ಚೂರುಗಳು ಹೊಕ್ಕಿವೆ. ದಶಕಗಳ ಮಟ್ಟಿಗೆ ಸರಿಯಾಗಿ ಊಟ ಕೊಡದೇ ಇರುವ ಕಾರಣ ಎಮ್ಮಾ ಆರೋಗ್ಯದಲ್ಲೂ ಸಿಕ್ಕಾಪಟ್ಟೆ ವ್ಯತ್ಯಾಸವಾಗಿದೆ. ಎಮ್ಮಾಳನ್ನು ಈಗ ಆಗ್ರಾ-ಮಥುರಾ ಗಡಿಯಲ್ಲಿರುವ ಆನೆ ಸಂರಕ್ಷಣಾ ಕೇಂದ್ರಕ್ಕೆ ಆರೈಕೆಗೆಂದು ಕಳುಹಿಸಲಾಗಿದೆ.