ಭಾರತೀಯ ದಿನಪತ್ರಿಕೆಗಳಲ್ಲಿ ಬಿತ್ತರಗೊಳ್ಳುವ ಮ್ಯಾಟ್ರಿಮೋನಿಯಲ್ ಜಾಹಿರಾತುಗಳಲ್ಲಿ ಜಾತೀಯತೆ, ಲಿಂಗ ಪಾರಮ್ಯತೆ ಸೇರಿದಂತೆ ಅನೇಕ ರೀತಿಯ ಸಣ್ಣತನದ ಮನಸ್ಥಿತಿಗಳು ಢಾಳವಾಗಿ ಕಾಣುತ್ತಲೇ ಇರುತ್ತವೆ.
ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಟೀಕೆ/ವ್ಯಂಗ್ಯಗಳು ವ್ಯಕ್ತವಾದರೂ ಸಹ ಇಂಥದ್ದೇ ವಿವಾದಾತ್ಮಕವಾದ ಮ್ಯಾಟ್ರಿಮೋನಿ ಜಾಹೀರಾತುಗಳು ದಿನಪತ್ರಿಕೆಯಲ್ಲಿ ಪ್ರಿಂಟ್ ಆಗುತ್ತಲೇ ಇರುತ್ತವೆ. ಸಂಭಾವ್ಯ ವಧು/ವರರಿಂದ ಭಯಂಕರ ನಿರೀಕ್ಷೆಗಳ ಪಟ್ಟಿ ಇರುವ ಕಾರಣ ಈ ಮ್ಯಾಟ್ರಿಮೋನಿಯಲ್ ಜಾಹೀರಾತುಗಳಲ್ಲಿ ಸಿಕ್ಕಾಪಟ್ಟೆ ಅಸಹಜ ಡಿಮ್ಯಾಂಡ್‌ಗಳು ಇರುತ್ತವೆ.
ಇದೀಗ ಇಂಥದ್ದೇ ಒಂದು ಜಾಹೀರಾತು ಸಾಕಷ್ಟು ಎಡವಟ್ಟು ಕಾರಣಗಳಿಗೆ ವೈರಲ್ ಆಗಿದೆ. ನೋಯಿಡಾದ ‘effluent industrialist’ (ತಪ್ಪು ಸ್ಪೆಲ್ಲಿಂಗ್) ಒಬ್ಬರು ’ಫೇರ್’ ಆಗಿರುವ ವಧುವನ್ನು ನೋಡುತ್ತಿದ್ದಾರೆ ಎಂದು ಈ ಜಾಹೀರಾತಿನಲ್ಲಿ ತಿಳಿಸಲಾಗಿದೆ. ’ಫೇರ್’ ಹುಡುಗಿಯೇ ಬೇಕು ಎನ್ನುತ್ತಿರುವ ಈ ಬ್ಯುಸಿನೆಸ್‌ಮನ್ ಅನ್ನು ಟೀಕೆ ಮಾಡುತ್ತಾರೆ ಎಂದು ಜನರು ಅಂದುಕೊಳ್ಳುತ್ತಿದ್ದಂತೆಯೇ, ಆತನ ತಪ್ಪು ಸ್ಪೆಲ್ಲಿಂಗ್ ಬಗ್ಗೆ ಟೀಕಾಸ್ತ್ರಗಳ ಪ್ರಯೋಗಗಳು ಆಗಿವೆ.
ಸಿರಿವಂತ ಎಂಬ ಅರ್ಥದ ’affluent’ ಪದದ ಬದಲಿಗೆ ಕೊಳಚೆ ನೀರು ಎಂಬ ಅರ್ಥದ ’effluent’ ಪದದ ಬಳಕೆಯಾಗಿರುವುದು ಈ ನಗೆಪಾಟಲಿಗೆ ಕಾರಣವಾಗಿದೆ.