ಸಿಬಿಎಸ್‌ಇ ಮಂಡಳಿ 6 ರಿಂದ 10 ನೇ ತರಗತಿ ವಿದ್ಯಾರ್ಥಿಗಳಿಗೆ ನೆಮ್ಮದಿ ಸುದ್ದಿಯೊಂದನ್ನು ನೀಡಿದೆ. ಇನ್ಮುಂದೆ ಮಕ್ಕಳು ಪಾಠ ಕಲಿಯಲು ಕಷ್ಟಪಡಬೇಕಾಗಿಲ್ಲ. ಬಾಯಿಪಾಠ ಮಾಡಿ, ಪರೀಕ್ಷೆ ಪಾಸ್ ಮಾಡುವ ತಲೆಬಿಸಿ ಇರುವುದಿಲ್ಲ. ಸಿಬಿಎಸ್ಸಿ 6ರಿಂದ 10ನೇ ತರಗತಿಗೆ ಹೊಸ ಮೌಲ್ಯಮಾಪನ ಚೌಕಟ್ಟನ್ನು ಬಿಡುಗಡೆ ಮಾಡಿದೆ. ಸಿಬಿಎಸ್‌ಇ ಅಸೆಸ್‌ಮೆಂಟ್ ಫ್ರೇಮ್‌ವರ್ಕನ್ನು ಬ್ರಿಟಿಷ್ ಕೌನ್ಸಿಲ್ ಸಹಯೋಗದೊಂದಿಗೆ ಸಿದ್ಧಪಡಿಸಲಾಗಿದೆ. ಮಾರ್ಚ್ 24 ರಂದು ಶಿಕ್ಷಣ ಸಚಿವ ರಮೇಶ್ ಪೋಖ್ರಿಯಾಲ್ ಬಿಡುಗಡೆ ಮಾಡಿದ್ದಾರೆ.
ಇದು ಮೂರು ಪ್ರಮುಖ ವಿಷಯಗಳನ್ನು ಕಲಿಯಲು ಮಕ್ಕಳಿಗೆ ನೆರವಾಗಲಿದೆ. ವಿಜ್ಞಾನ, ಗಣಿತ ಮತ್ತು ಇಂಗ್ಲಿಷ್ ವಿಷಯಗಳಿಗೆ ಈ ಫ್ರೇಮ್ ವರ್ಕ್ ಅನ್ವಯಿಸಲಾಗುವುದು. ಇದನ್ನು ರಾಷ್ಟ್ರೀಯ ಶಿಕ್ಷಣ ನೀತಿಯಡಿ ಪ್ರಾರಂಭಿಸಲಾಗಿದೆ. ಇದ್ರಿಂದ ಮಕ್ಕಳ ಒತ್ತಡ ಕಡಿಮೆಯಾಗಲಿದೆ. ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಶಿಕ್ಷಣ ಸಿಗಲಿದೆ.
ಹೊಸ ಶಿಕ್ಷಣ ನೀತಿಯಡಿಯಲ್ಲಿ ಮಕ್ಕಳಿಗೆ ಪುಸ್ತಕ ಜ್ಞಾನದ ಬದಲು ನೈಜ ಜಗತ್ತಿಗೆ ಸಂಪರ್ಕ ಕಲ್ಪಿಸುವ ಮೂಲಕ ಶಿಕ್ಷಣವನ್ನು ನೀಡಲಾಗುವುದು. ಇದು ಮಕ್ಕಳ ಕೌಶಲ್ಯವನ್ನು ಹೆಚ್ಚಿಸಲಿದೆ. ಇದಕ್ಕೆ ಸಂಬಂಧಿಸಿದಂತೆ ಶಿಕ್ಷಕರಿಗೆ ಅಗತ್ಯ ತರಬೇತಿ ನೀಡಲಾಗುವುದು. ಮಕ್ಕಳಿಗೆ ದೈನಂದಿನ ಸಮಸ್ಯೆಗಳು ಮತ್ತು ಉದಾಹರಣೆಗಳೊಂದಿಗೆ ವಿಷಯಗಳನ್ನು ಕಲಿಸಲಾಗುವುದು.