ಚೆನ್ನೈ: ತಮಿಳುನಾಡಿನ ಹಲವೆಡೆ ಈಗಲೂ ಅಸ್ಪೃಶ್ಯತೆ ಅವ್ಯಾಹತವಾಗಿದ್ದು, ಕೆಳಜಾತಿಯಾಕೆ ಎಂಬ ಕಾರಣಕ್ಕೆ ಪಂಚಾಯಿತಿ ಸದಸ್ಯೆಯನ್ನೇ ನೆಲದ ಕೂರಿಸಿರುವ ಪ್ರಕರಣ ಬೆಳಕಿಗೆ ಬಂದಿದೆ.
ಕುಡಲೂರು ಜಿಲ್ಲೆ ತೆರ್ಕು ತಿಟ್ಟೈ ಗ್ರಾಮ ಪಂಚಾಯಿತಿಯ ಪರಿಶಿಷ್ಟ ಪಂಗಡ ಮೀಸಲು ಕ್ಷೇತ್ರದಿಂದ ಗೆದ್ದು ಬಂದಿದ್ದ ಮಹಿಳಾ ಸದಸ್ಯೆಯನ್ನು ನೆಲದ ಮೇಲೆ ಕೂರಿಸಿ, ಉಳಿದೆಲ್ಲ ಸದಸ್ಯರೂ ಕುರ್ಚಿ ಮೇಲೆ ಆಸೀನರಾಗಿದ್ದರು.
ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಮೇಲಧಿಕಾರಿಗಳ ಗಮನಕ್ಕೆ ತಾರದೆ ಕರ್ತವ್ಯಲೋಪ ಎಸಗಿದ ಪಂಚಾಯಿತಿ ಕಾರ್ಯದರ್ಶಿಯನ್ನು ಜಿಲ್ಲಾಧಿಕಾರಿ ಅಮಾನತು ಮಾಡಿ ಆದೇಶಿಸಿದ್ದಾರೆ.
ಕೇವಲ ಕಾರ್ಯದರ್ಶಿ ವಿರುದ್ಧ ಕ್ರಮ ಆದರೆ ಸಾಲದು ಎಂದಿರುವ ನೆಟ್ಟಿಗರು, ಆದಿ ದ್ರಾವಿಡಳು ಎಂಬ ಕಾರಣಕ್ಕಾಗಿ ಆಕೆಯನ್ನು ಹೀಗೆ ನಡೆಸಿಕೊಂಡ ಪಂಚಾಯಿತಿ ಉಪಾಧ್ಯಕ್ಷನ ವಿರುದ್ಧವೂ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಆಕೆ, ನನ್ನ ಜಾತಿಯ ಕಾರಣದಿಂದಾಗಿ ಉಪಾಧ್ಯಕ್ಷರು ಸಭೆಗೇ ನನ್ನನ್ನು ಬಿಟ್ಟುಕೊಳ್ಳುತ್ತಿರಲಿಲ್ಲ. ಧ್ವಜಾರೋಹಣ ಮಾಡಲೂ ಬಿಡುತ್ತಿರಲಿಲ್ಲ. ಮೇಲ್ವರ್ಗದವರಿಗೆ ನಾನೂ ಇಷ್ಟು ದಿನ ಸಹಕರಿಸುತ್ತಲೇ ಬಂದಿದ್ದೆ. ಆದರೀಗ ಮಿತಿ ಮೀರಿದೆ ಎಂದಿದ್ದಾರೆ.
ಹೀಗಾಗಿ ಪರಾರಿಯಾಗಿರುವ ಉಪಾಧ್ಯಕ್ಷನನ್ನು ಬಂಧಿಸಿ ಎಸ್ಸಿ/ ಎಸ್ಟಿ (ದೌರ್ಜನ್ಯ ನಿಷೇಧ) ಕಾಯ್ದೆಯಡಿ ಬಂಧಿಸಬೇಕು ಎಂಬ ಆಗ್ರಹ ಕೇಳಿಬಂದಿದೆ.