ದುಬೈ ಮೂಲದ ಭಾರತ ನಿವಾಸಿ ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ಹಾಡೊಂದನ್ನು ರಚಿಸಿದ್ದಾರೆ. “ನಮೋ ನಮೋ ವಿಶ್ವಗುರು ಭಾರತ ಮೇರಾ” ಎಂದು ಆ ಹಾಡು ಪ್ರಾರಂಭವಾಗುತ್ತದೆ. ಭಾರತೀಯ ಹೈಸ್ಕೂಲ್ ನ 10 ನೇ ತರಗತಿ ಬಾಲಕಿ ಸುಚೇತಾ ಸತೀಶ್ ಹಾಡು ಹಾಡಿದ್ದು, ಮೋದಿ ಅವರು 70 ನೇ ಹುಟ್ಟು ಹಬ್ಬದ ದಿನವಾದ ಸೆ.17 ರಂದು ಡಿಜಿಟಲ್ ಫ್ಲ್ಯಾಟ್ ಫಾರ್ಮ್ ನಲ್ಲಿ ಹಾಡನ್ನು ಬಿಡುಗಡೆ ಮಾಡಲಾಗಿದೆ ಎಂದು ಮಾಧ್ಯಮವೊಂದರ ವರದಿ ತಿಳಿಸಿದೆ.
ಮಲೆಯಾಳಿ ಕವಿ, ಹಾಡುಗಾರ ಅಜಯ ಗೋಪಾಲ್ ಹಾಡನ್ನು ರಚಿಸಿದ್ದು, ಬಾಲಕಿ ಸುಚೇತಾ ಅವರ ತಾಯಿ ಸುಮಿತಾ ಅವರು ಅದನ್ನು ಹಿಂದಿಗೆ ಅನುವಾದ ಮಾಡಿದ್ದಾರೆ. ಹಾಡಿನ ಸ್ವರ ಸಂಯೋಜನೆ ಹಾಗೂ ಪಕ್ಕವಾದ್ಯಗಳ ಸಹಕಾರವನ್ನು ಬಾಲಿವುಡ್ ಸಂಗೀತಕಾರ ಮೋಂಟಿ ಶರ್ಮಾ ನೀಡಿದ್ದಾರೆ.
ವಿಶೇಷ ಎಂದರೆ ಪ್ರತಿಯೊಬ್ಬರೂ ಬೇರೆ ಬೇರೆ ನಗರಗಳಲ್ಲಿ ಇದ್ದು ಹಾಡನ್ನು ಪೂರ್ಣ ಮಾಡಿದ್ದಾರೆ. ಕೊಳಲು ವಾದಕ ಬೆಂಗಳೂರಿನಲ್ಲಿದ್ದರೆ, ಹಾಡನ್ನು ಮುಂಬೈನಲ್ಲಿ ಮಿಕ್ಸಿಂಗ್ ಮಾಡಲಾಗಿದೆ. ಕಣ್ಣೂರಿನಲ್ಲಿ ಎಡಿಟಿಂಗ್ ಮಾಡಲಾಗಿದ್ದರೆ, ಸುಚೇತಾ ಶಾರ್ಜಾದ ಸ್ಟುಡಿಯೋದಲ್ಲಿ ಹಾಡಿದ್ದಾರೆ. ಹಾಡಿನ ವಿಡಿಯೋದಲ್ಲಿ ಮೋದಿ ಅವರ ರಾಜಕೀಯ ಚಿತ್ರಣ, ಮೇಕ್ ಇನ್ ಇಂಡಿಯಾ ಕ್ಯಾಂಪೇನಿಂಗ್, ಭಾರತದ ಗಿರಿ ಕಂದರಗಳು, ನದಿಗಳು, ಮರುಭೂಮಿ, ಸಾಂಸ್ಕೃತಿಕ ತಾಣಗಳನ್ನು ಬಿಂಬಿಸಲಾಗಿದೆ.