ಅಕ್ಟೋಬರ್ 2 ನೆನಪಿದೆ ಅಲ್ಲವೇ ? ಮಹಾತ್ಮ ಗಾಂಧಿ ಜಯಂತಿ. ಲಾಲ್ ಬಹದ್ದೂರ್ ಶಾಸ್ತ್ರಿ ಜನ್ಮದಿನ. ಇವಿಷ್ಟೇ ಅಲ್ಲ, ದೃಶ್ಯ ಸಿನಿಮಾದ ಅಭಿಮಾನಿಗಳಿಗೆ ಬಹುವಾಗಿ ಕಾಡುವ ನೆನಪಿದು.
ಹೌದು, 2015 ರಲ್ಲಿ ಬಿಡುಗಡೆಯಾದ ದೃಶ್ಯಂ ಚಿತ್ರ ನೋಡಿದವರಿಗೆಲ್ಲ ಅಕ್ಟೋಬರ್ 2 ನ್ನು ಮರೆಯಲು ಸಾಧ್ಯವೇ ಇಲ್ಲ. ಪ್ರತಿ ವರ್ಷ ನೆನಪಿನಲ್ಲಿ ಇಟ್ಟುಕೊಳ್ಳಲೇಬೇಕಾದ ದಿನ.
ಚಿತ್ರದ ನಾಯಕ ವಿಜಯ್ ಸಾಲ್ಗಾಂವ್ಕರ್ ಪದೇ ಪದೇ ಜ್ಞಾಪಿಸುವ ಈ ದಿನವನ್ನು ಅಭಿಮಾನಿಗಳು ಈಗಲೂ ಮರೆತಿಲ್ಲ. ತನ್ನ ಕುಟುಂಬವನ್ನು ಕಾಪಾಡಿಕೊಳ್ಳಲು ಕೊಲೆ ಮಾಡುವ ಕಥಾನಾಯಕ, ಗೋವಾದ ಪಣಜಿಯಲ್ಲಿ ನಡೆದ ಸ್ವಾಮಿ ಚಿನ್ಮಯಾನಂದ ಅವರ ಸತ್ಸಂಗದಲ್ಲಿ ಇಡೀ ಕುಟುಂಬ ಭಾಗಿಯಾಗಿ, ತನ್ನೂರಿಗೆ ಹಿಂದಿರುಗುವ ದಾರಿ ತುಂಬ ಅಕ್ಟೋಬರ್ 2 ಕ್ಕೆ ಸತ್ಸಂಗ, ಹೋಟೆಲ್ ನಲ್ಲಿ ಉಳಿದು, ಊಟ ಮಾಡಿ, ಸಿನಿಮಾ ನೋಡಿ, ಅಕ್ಟೋಬರ್ 3 ರಂದು ಮರಳುತ್ತಾನೆ.
ಪೊಲೀಸ್ ತನಿಖೆ ಎದುರಿಸುವ ಸಂದರ್ಭದಲ್ಲಿ ಎಲ್ಲರೂ ಇದೇ ದಿನಾಂಕ ನೆನಪಿಟ್ಟುಕೊಂಡು ಹೇಳುವಂತೆ ಸೂಚಿಸಿರುತ್ತಾನೆ. ಇದು ಪಾತ್ರಧಾರಿಗಳಿಗೆ ನೆನಪಿದೆಯೋ ಇಲ್ಲವೋ ಗೊತ್ತಿಲ್ಲ. ಚಿತ್ರ ನೋಡಿದ ಅಭಿಮಾನಿಗಳ ತಲೆಯಲ್ಲಿ ಮಾತ್ರ ಈಗಲೂ ಗುನುಗುತ್ತಲೇ ಇದೆ. ಟ್ವಿಟ್ಟರ್ ನಲ್ಲಿ ಅಭಿಮಾನಿಗಳು ದೃಶ್ಯಂ ಚಿತ್ರದ ಪ್ರತಿ ಸನ್ನಿವೇಶದ ಬಗ್ಗೆಯೂ ದೊಡ್ಡ ಚರ್ಚೆಯನ್ನೇ ನಡೆಸಿದ್ದಾರೆ.