ನವದೆಹಲಿ: ಭಾರತದಲ್ಲಿ ರಷ್ಯಾದ ಸ್ಪುಟ್ನಿಕ್ V ಲಸಿಕೆ ಪ್ರಯೋಗಕ್ಕೆ ಅನುಮತಿ ನೀಡಲಾಗಿದೆ. ಲಸಿಕೆಯ ವೈದ್ಯಕೀಯ ಪ್ರಯೋಗಕ್ಕೆ ಡ್ರಗ್ ಕಂಟ್ರೋಲ್ ಜನರಲ್ ಆಫ್ ಇಂಡಿಯಾ(DCGI) ಸಮ್ಮತಿ ನೀಡಿದೆ.
ಡಾ. ರೆಡ್ಡೀಸ್ ಲ್ಯಾಬೋರೇರಿ ಕಂಪನಿಯಿಂದ ಸ್ಪುಟ್ನಿಕ್ V ಲಸಿಕೆಯ ಎರಡು ಮತ್ತು ಮೂರನೇ ಹಂತದ ಪ್ರಯೋಗ ನಡೆಸಲು ಅನುಮತಿ ನೀಡಲಾಗಿದೆ.
ವಿಶ್ವದ ಅನೇಕ ದೇಶಗಳಲ್ಲಿ ಕೊರೋನಾ ಲಸಿಕೆ ಅಭಿವೃದ್ಧಿಪಡಿಸುವ ಕಾರ್ಯದಲ್ಲಿ ತಜ್ಞರು, ವೈದ್ಯರು ನಿರತರಾಗಿದ್ದಾರೆ. ಕೆಲವು ಲಸಿಕೆಗಳು ಯಶಸ್ವಿಯಾಗಿದ್ದು ಪ್ರಯೋಗದ ಅಂತಿಮ ಹಂತದಲ್ಲಿವೆ. ಹೀಗಿರುವಾಗಲೇ ರಷ್ಯಾ ಕೊರೋನಾ ಲಸಿಕೆ ಬಿಡುಗಡೆ ಮಾಡಿದ ಮೊದಲ ದೇಶ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇನ್ನೂ ಎರಡು ಲಸಿಕೆಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲು ಸಜ್ಜಾಗಿದೆ.
ಭಾರತದಲ್ಲಿ ಸ್ಪುಟ್ನಿಕ್ V ಲಸಿಕೆ ಪ್ರಯೋಗಕ್ಕೆ ಸಮ್ಮತಿ ನೀಡಲಾಗಿದೆ. ಸ್ಪುಟ್ನಿಕ್ V ಲಸಿಕೆಯ ಎರಡು ಮತ್ತು ಮೂರನೇ ಮಾನವ ಕ್ಲಿನಿಕಲ್ ಪ್ರಯೋಗಗಳನ್ನು ಭಾರತದಲ್ಲಿ ನಡೆಸಲು ಡಿಸಿಜಿಐ ಸಮ್ಮತಿಸಿದೆ ಎಂದು ಹೈದರಾಬಾದ್ ಮೂಲದ ಡಾ. ರೆಡ್ಡೀಸ್ ಲ್ಯಾಬೋರೇಟರೀಸ್ ಮತ್ತು ರಷ್ಯಾ ನೇರ ಹೂಡಿಕೆ ನಿಧಿ ಹೇಳಿವೆ.
ಇದು ಬಹುತೇಕ ಕೇಂದ್ರದ ನಿಯಂತ್ರಿತ ಅಧ್ಯಯನವಾಗಿರುತ್ತದೆ. ಸುರಕ್ಷತೆ ಮತ್ತು ಇಮ್ಯೂನೊಜೆನೆಸಿಟಿ ಅಧ್ಯಯನವನ್ನು ಒಳಗೊಂಡಿರುತ್ತದೆ. ಕಳೆದ ಸೆಪ್ಟಂಬರ್ ನಲ್ಲಿ ರೆಡ್ಡೀಸ್ ಲ್ಯಾಬೋರೇಟರೀಸ್ ಮತ್ತು ರಷ್ಯಾದ RDIF ಭಾರತದಲ್ಲಿ ಲಸಿಕೆ ಪ್ರಯೋಗ ನಡೆಸಲು ಒಪ್ಪಂದ ಮಾಡಿಕೊಂಡಿve.
ಇದರ ಪಾಲುದಾರಿಕೆ ಭಾಗವಾಗಿ RDIF 100 ಮಿಲಿಯನ್ ಲಸಿಕೆ ಉತ್ಪಾದಿಸಲಿದೆ. ಇದೊಂದು ಮಹತ್ವದ ಬೆಳವಣಿಗೆಯಾಗಿದ್ದು ಭಾರತದಲ್ಲಿ ಕ್ಲಿನಿಕಲ್ ಪ್ರಯೋಗ ಪ್ರಾರಂಭಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಸಾಂಕ್ರಾಮಿಕ ರೋಗವನ್ನು ಎದುರಿಸಲು ಸುರಕ್ಷಿತ ಮತ್ತು ಪರಿಣಾಮಕಾರಿಯಾದ ಲಸಿಕೆಯನ್ನು ಹೊರತರುವಲ್ಲಿ ನಾವು ಬದ್ಧರಾಗಿದ್ದೇವೆ ಎಂದು ಡಾ. ರೆಡ್ಡಿಸ್ ವತಿಯಿಂದ ಮಾಹಿತಿ ನೀಡಲಾಗಿದೆ.
ರಷ್ಯಾದ ನೇರ ಹೂಡಿಕೆ ನಿಧಿಯ(RDIF) ಸಿಇಓ ಕಿರೀಲ್ ಡಿಮಿಟ್ರಿವ್ ಅವರು, ಭಾರತೀಯ ಸಂಸ್ಥೆಯ ಸಹಯೋಗದಲ್ಲಿ ಲಸಿಕೆ ಪ್ರಯೋಗಕ್ಕೆ ಮುಂದಾಗಿರುವುದು ಸಂತಸ ತಂದಿದೆ. ಸ್ಪುಟ್ನಿಕ್ V ಲಸಿಕೆ ಭಾರತದಲ್ಲಿ ವೈದ್ಯಕೀಯ ಅಭಿವೃದ್ಧಿಯನ್ನು ಮತ್ತಷ್ಟು ಬಲಪಡಿಸುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.