
ಪದ್ಮ ಶ್ರೀ ಪುರಸ್ಕೃತ ಹಾಗೂ ಭಾರತೀಯ ವೈದ್ಯಕೀಯ ಸಂಘ (ಐಎಂಎ) ಮಾಜಿ ಅಧ್ಯಕ್ಷ ಡಾ. ಕೆ.ಕೆ ಅಗರ್ವಾಲ್ ಅವರು ಕೋವಿಡ್ ಲಸಿಕೆ ಕುರಿತಂತೆ ತಮ್ಮ ಮಡದಿಯೊಂದಿಗೆ ಮಾತನಾಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ತಮ್ಮ ಮಡದಿಗೆ ತಿಳಿಸದೇ ಕೋವಿಡ್ ಲಸಿಕೆಯನ್ನು ತೆಗೆದುಕೊಂಡ ಕಾರಣ ಪತ್ನಿಯ ಸಿಟ್ಟನ್ನು ಎದುರಿಸಬೇಕಾಗಿ ಬಂದಿದೆ ಅಗರ್ವಾಲ್‌ಗೆ.
ಮತ್ತೆ ಏರಿಕೆಯಾಯ್ತು ಕೊರೊನಾ – ಒಂದೇ ದಿನದಲ್ಲಿ 18 ಸಾವಿರಕ್ಕೂ ಅಧಿಕ ಮಂದಿಯಲ್ಲಿ ಸೋಂಕು ಪತ್ತೆ
“ಲಸಿಕೆಗೆ ಸಂಬಂಧಿಸಿದಂತೆ ಜನರ ಮನದಲ್ಲಿ ಭೀತಿ ನೆಲೆಸಿದೆ. ಈ ಕಾರಣದಿಂದ ಖುದ್ದು ನಾನೇ ಮೊದಲು ಲಸಿಕೆ ತೆಗೆದುಕೊಂಡು ಜನರ ಮನದಲ್ಲಿ ಇರುವ ಭೀತಿಯನ್ನು ಹೋಗಲಾಡಿಸಲು ಮುಂದಾದೆ. ನನ್ನ ಮಡದಿಯ ಕುಟುಂಬದ ಅನೇಕ ಸದಸ್ಯರು ಲಸಿಕೆ ಹಾಕಿಸಿಕೊಳ್ಳಲು ನಿರಾಕರಿಸಿದ್ದು, ಇದೇ ಕಾರಣಕ್ಕೆ ಯಾರಿಗೂ ಹೇಳದೇ ಲಸಿಕೆ ತೆಗೆದುಕೊಳ್ಳಲು ನಿರ್ಧರಿಸಿದೆ. ಕೊರೋನಾ ತಜ್ಞನಾದ ನನಗೆ ಈಗ 63 ವರ್ಷ ವಯಸ್ಸು. ನನಗೆ ಪಲ್ಮನರಿ ಎಂಬಾಲಿಸಂ ಸಹ ಇತ್ತು. ಲಸಿಕೆ ತೆಗೆದುಕೊಂಡ ಬಳಿಕ ನನಗೆ ಏನೂ ಆಗುವುದಿಲ್ಲ ಎಂದು ನನಗೆ ತಿಳಿದಿತ್ತು. ಇದೇ ಸಂದೇಶವನ್ನು ನಾನು ಎಲ್ಲರಿಗೂ ಕಳುಹಿಸಲು ಇಚ್ಛಿಸುತ್ತೇನೆ” ಎಂದು ಮಾಧ್ಯಮವೊಂದಕ್ಕೆ ಕೊಟ್ಟ ಸಂದರ್ಶನದ ವೇಳೆ ಅಗರ್ವಾಲ್ ತಿಳಿಸಿದ್ದಾರೆ.
ಸಂದರ್ಶನದ ವೇಳೆ ಹಾಜರಿದ್ದ ಅಗರ್ವಾಲ್ ಮಡದಿ, “ಸೋಮವಾರದಂದು ಇಬ್ಬರೂ ಲಸಿಕೆ ಹಾಕಿಸಿಕೊಳ್ಳಲು ನಿರ್ಧರಿಸಿದ್ದೆವು. ಆದರೆ, ನಾನು ಇಲ್ಲದೇ ಇರುವ ಸಂದರ್ಭದಲ್ಲಿ ಲಸಿಕೆ ಹಾಕಿಸಿಕೊಳ್ಳಲು ಅಗರ್ವಾಲ್ ನಿರ್ಧರಿಸಿದ್ದಾರೆ ಎಂದು ತಿಳಿದು ನನಗೆ ಸಿಟ್ಟು ಬಂದಿತ್ತು” ಎಂದು ತಿಳಿಸಿದ್ದಾರೆ.