ಕೆಲ ದಿನಗಳ ಹಿಂದಷ್ಟೇ ಆನೆಗೆ ಅನನಾಸ್ ಹಣ್ಣಿನಲ್ಲಿ ಪಟಾಕಿ ಇಟ್ಟು ಸಿಡಿಸಿ ಸಾಯಿಸಿದ ಘಟನೆ ಮರೆಯುವ ಮೊದಲೇ, ಕೇರಳದಲ್ಲಿ ಪ್ರಾಣಿಗಳ ಮೇಲೆ ಇದೇ ರೀತಿಯ ಹಿಂಸೆ ನೀಡಿರುವ ಮತ್ತೊಂದು ಅಮಾನವೀಯ ಘಟನೆ ಬೆಳಕಿಗೆ ಬಂದಿದೆ.
ಹೌದು, ತ್ರಿಶೂರ್ ಜಿಲ್ಲೆಯಲ್ಲಿ ಶ್ವಾನದ ಬಾಯಿಗೆ ಗಟ್ಟಿಯಾಗಿ ಟೇಪ್ ನ್ನು ಕಿಡಿಗೇಡಿಗಳು ಹಾಕಿರುವ ಘಟನೆ ನಡೆದಿದೆ. ಈ ರೀತಿ ನಾಯಿ ಬಾಯಿಗೆ ಟೇಪ್ ಹಾಕಿದ್ದರಿಂದ, ಒಂದು ದಿನವಿಡಿ ನೀರು, ಆಹಾರವಿಲ್ಲದೇ ಒದ್ದಾಡಿದೆ ಎಂದು ತಿಳಿದುಬಂದಿದೆ. ಬಳಿಕ ಪ್ರಾಣಿ ರಕ್ಷಣಾ ಸಂಸ್ಥೆಯೊಂದು ನಾಯಿಯ ಈ ಸ್ಥಿತಿ ಕಂಡು, ಕೂಡಲೇ ಟೇಪ್ ತೆಗೆದು ಅಗತ್ಯ ಆರೋಗ್ಯ ಸೇವೆಯನ್ನು ಒದಗಿಸಿದ್ದಾರೆ.
ಕಿಡಿಗೇಡಿಗಳು ಈ ರೀತಿ ಮಾಡಿರುವುದರಿಂದ ಶ್ವಾನಕ್ಕೆ ನೀರು ಕುಡಿಯಲು ಸಾಧ್ಯವಾಗದ ಸ್ಥಿತಿ ಎದುರಾಗಿತ್ತು. ಬಾಯಿಗೆ ಹಾಕಿದ್ದ ಟೇಪ್ ತೆಗೆಯುತ್ತಿದ್ದಂತೆ ಸುಮಾರು ಎರಡು ಲೀಟರ್ ನೀರನ್ನು ಕುಡಿದಿದೆ ಎನ್ನುವ ಮಾತುಗಳನ್ನು ಸ್ಥಳೀಯರು ಹೇಳಿದ್ದಾರೆ. ಶ್ವಾನಕ್ಕೆ ಈ ರೀತಿ ಚಿತ್ರಹಿಂಸೆ ನೀಡಿದ್ದನ್ನು ದೊಡ್ಡಮಟ್ಟದಲ್ಲಿ ವಿರೋಧಿಸಲಾಗುತ್ತಿದೆ.