ನೋಯ್ಡಾ: ಇಲ್ಲಿನ ಸರ್ಕಾರಿ ಆಸ್ಪತ್ರೆಯ ವೈರಾಲಜಿ ಪ್ರಯೋಗಾಲಯ ತಂಡದ ಭಾಗವಾಗಿರುವ ಆಂಧ್ರ ಪ್ರದೇಶದ ವೈದ್ಯ ದಂಪತಿ ಇದುವರೆಗೆ ಬರೋಬ್ಬರಿ 1 ಲಕ್ಷ ಕೊರೊನಾ ಮಾದರಿಗಳ ಪರೀಕ್ಷೆ ನಡೆಸಿದ್ದಾರೆ.
ಆಂಧ್ರ ಪ್ರದೇಶದ ಕೃಷ್ಣಾ ಜಿಲ್ಲೆಯ ನುಜಿವೀಡುವಿನ ಚಾಲಸಾನಿ ಅಜಯ್ ಘೋಷ್ ಹಾಗೂ ಅವರ ಪತ್ನಿ ತಮ್ಮಿನೇನಿ ಕೃಷ್ಣ ಲತಾ ಅವರು ಗ್ರೇಟರ್ ನೋಯ್ಡಾದ ಗವರ್ನಮೆಂಟ್ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ (ಜಿಐಎಂಎಸ್)ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಡಾ. ಶಿವಾನಿ ಹಾಗೂ ಡಾ. ವಿವೇಕ್ ಗುಪ್ತಾ ಅವರ ನೇತೃತ್ವದ ಪ್ರಯೋಗಾಲಯ ತಂಡದಲ್ಲಿ ಈ ಇಬ್ಬರೂ ಕಾರ್ಯನಿರ್ವಹಿಸುತ್ತಿದ್ದಾರೆ. ತಂಡದಲ್ಲಿ ಒಟ್ಟು 3 ವೈದ್ಯರು, 5 ಪಿಎಚ್ ಡಿ ವಿದ್ಯಾರ್ಥಿಗಳು, 10 ಜನ ತಂತ್ರಜ್ಞರಿದ್ದಾರೆ.
“ನಾವಿಬ್ಬರೂ ಗಂಟಲ ದ್ರವದ ಮಾದರಿಗಳಿಂದ ಆರ್.ಎನ್.ಎ. ತೆಗೆಯುವುದು ಹಾಗೂ ಆರ್ .ಟಿ.-ಪಿಸಿಆರ್ ಯಂತ್ರ ಬಳಕೆಯಲ್ಲಿ ಅನುಭವ ಹೊಂದಿದ್ದೇವೆ. ಏಪ್ರಿಲ್ ನಲ್ಲಿ ದಿನಕ್ಕೆ 50 ಗಂಟಲ ದ್ರವದ ಮಾದರಿಗಳನ್ನು ಪರೀಕ್ಷಿಸುತ್ತಿದ್ದೆವು. ಈಗ ದಿನಕ್ಕೆ 2 ಸಾವಿರ ಮಾದರಿಗಳ ಪರೀಕ್ಷೆ ನಡೆಸುತ್ತಿದ್ದೇವೆ” ಎಂದು ಚಾಲಸಾನಿ ಅಜಯ್ ಘೋಷ್ ಹೇಳಿದ್ದಾರೆ.