
ಕೊರೊನಾ ವೈರಸ್ ವಾಸಿ ಮಾಡಲು ಸಾಕಷ್ಟು ಸುಳ್ಳು ಪರಿಹಾರಗಳು ಸೋಶಿಯಲ್ ಮೀಡಿಯಾ ಸಂದೇಶದ ಮೂಲಕ ಹರಿದಾಡ್ತಿದೆ. ಕರ್ಪೂರ, ಲವಂಗ, ಸೋಂಪು ಹಾಗೂ ನೀಲಗಿರಿ ಎಣ್ಣೆಯನ್ನ ಬಿಳಿ ಬಟ್ಟೆಯಲ್ಲಿ ಹಾಕಿಟ್ಟು ಮೂಸುತ್ತಾ ಇರೋದ್ರಿಂದ ದೇಹದಲ್ಲಿ ಆಮ್ಲಜನಕ ಪ್ರಮಾಣ ಕಡಿಮೆ ಆಗೋದಿಲ್ಲವೆಂಬ ಸಂದೇಶ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ. ಆದರೆ ಈ ಸಂದೇಶಕ್ಕೆ ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ. ಹೀಗಾಗಿ ಇದೊಂದು ಸುಳ್ಳು ಪರಿಹಾರವಾಗಿದೆ.
ಅಂದಹಾಗೆ ಕರ್ಪೂರದಿಂದ ಆಮ್ಲಜನಕ ಮಟ್ಟ ಹೆಚ್ಚಾಗೋದೇ ಇಲ್ಲ. ಇದು ಮೂಗಿನಲ್ಲಿ ಬ್ಲಾಕ್ ಆಗಿದ್ದರೆ ಅದನ್ನ ನಿರಾಳ ಮಾಡೋದ್ರಿಂದ ನಿಮಗೆ ಕೊಂಚ ಆರೋಗ್ಯ ಸುಧಾರಿಸಿದಂತೆ ಭಾಸವಾಗುತ್ತೆ ಎನ್ನಲಾಗಿದೆ.
ಇದೇ ರೀತಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿರುವ ಇನ್ನೊಂದು ಸಂದೇಶವೆಂದರೆ – ರಾಮದೇವ್ ಪತಂಜಲಿ ರಿಸರ್ಚ್ ಇನ್ಸ್ಟಿಟ್ಯೂಟ್ನ ದಿವ್ಯಾ ಸ್ವಸರಿ ಕೊರೊನಿಲ್ ಕಿಟ್. ಇದರಲ್ಲಿ ಅಶ್ವಗಂಧ, ತುಳಸಿ, ಅಮೃತ ಬಳ್ಳಿ ಸೇರಿದಂತೆ ಇನ್ನೂ ಹಲವು ಔಷಧೀಯ ಸಸ್ಯಗಳನ್ನ ಒಳಗೊಂಡಿರುವ ಕಿಟ್ ಇದಾಗಿದೆ. ಕಳೆದ ವರ್ಷ ಫೆಬ್ರವರಿಯಲ್ಲಿ ಆಯುಷ್ ಸಚಿವಾಲಯ ಪತಂಜಲಿ ಆಯುರ್ವೇದ ಕೊರೊನಿಲ್ ನ್ನು ಕೊರೊನಾ ಟ್ರೀಟ್ಮೆಂಟ್ಗೆ ಅನುಮೋದನೆ ನೀಡಿತ್ತು.
ವಿಶ್ವ ಆರೋಗ್ಯ ಸಂಸ್ಥೆ ತನ್ನ ಸ್ಪಷ್ಟನೆಯ ಮೂಲಕ ವಿವಾದದಿಂದ ದೂರ ಸರಿದಿದೆ. ಫೆಬ್ರವರಿ 19, 2021ರಂದು ಮಾಡಲಾದ ಟ್ವೀಟ್ನಲ್ಲಿ ಆಗ್ನೇಯ ಏಷ್ಯಾದ ವಿಶ್ವ ಆರೋಗ್ಯ ಸಂಸ್ಥೆ, ಡಬ್ಲುಹೆಚ್ಓ ಸಾಂಪ್ರದಾಯಿಕ ಔಷಧಿಗಳು ಕೊರೊನಾ ವಿರುದ್ಧದ ಚಿಕಿತ್ಸೆಯಲ್ಲಿ ಪರಿಣಾಮಕಾರತ್ವವನ್ನ ತೋರಿಸಿಲ್ಲ ಎಂದು ಹೇಳಿದೆ.
ಕೋವಿಡ್ 19 ಹಾಗೂ ಮದ್ಯಪಾನದ ಸುತ್ತ ಹರಡುತ್ತಿರುವ ವಿವಿಧ ವದಂತಿಗಳ ವಿಚಾರವಾಗಿಯೂ ಡಬ್ಲುಹೆಚ್ಒ ಸ್ಪಷ್ಟನೆ ನೀಡಿದೆ. ಮದ್ಯಪಾನ ಚರ್ಮವನ್ನ ಸೋಂಕು ರಹಿತವಾಗಿಸುತ್ತೆ. ಅದನ್ನ ಹೊರತುಪಡಿಸಿ ದೇಹದ ಒಳಗಿನ ಯಾವುದೇ ಸೋಂಕಿಗೆ ಮದ್ಯಪಾನ ಪರಿಹಾರ ನೀಡಲ್ಲ. ಅಲ್ಲದೇ ಮದ್ಯಪಾನದಿಂದಾಗಿ ಆರೋಗ್ಯದ ಸಮಸ್ಯೆಗಳು ಇನ್ನಷ್ಟು ಹೆಚ್ಚಲಿದೆ ಎಂದು ಹೇಳಿದೆ.
ಕೊರೊನಾ ವೈರಸ್ ವಿರುದ್ಧ ʼವಿಟಮಿನ್ ಸಿʼಯುಕ್ತ ಆಹಾರ ಸೇವನೆ ಪರಿಣಾಮಕಾರತ್ವ ತೋರಿಸುತ್ತೆ ಎಂದು ನಂಬಲಾಗಿದೆ. ವಿಟಮಿನ್ ಸಿ ಅಂಶ ನಿಮ್ಮ ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನ ಹೆಚ್ಚಿಸುತ್ತೆ ಎಂಬ ಮಾತು ಸತ್ಯವಾಗಿದ್ದರೂ ಸಹ ವಿಟಮಿನ್ ಸಿಯುಕ್ತ ಆಹಾರ ಸೇವನೆಯಿಂದ ಕೊರೊನಾ ಕಡಿಮೆಯಾದ ಬಗ್ಗೆ ಪುರಾವೆ ದೊರೆತಿಲ್ಲ.
ಅದೇ ರೀತಿ ಬೆಚ್ಚನೆಯ ನೀರನ್ನ ಕುಡಿಯೋದ್ರಿಂದ ನಿಮಗೆ ಸ್ವಲ್ಪ ನಿರಾಳ ಎನಿಸಬಹುದು. ಆದರೆ ಇದರಿಂದ ಕೊರೊನಾ ವಾಸಿಯಾಗುತ್ತೆ ಅನ್ನೋದಕ್ಕೂ ಯಾವುದೇ ಸಾಕ್ಷ್ಯಗಳಿಲ್ಲ. ಅದೇ ರೀತಿ ಬಿಸಿ ನೀರಿನಿಂದ ಸ್ನಾನ ಮಾಡಿದ್ರೆ ಕೂಡ ಕೊರೊನಾ ಕಡಿಮೆಯಾಗೋದಿಲ್ಲ.
30 ಸೆಕೆಂಡ್ಗಳ ಕಾಲ ನೀವು ಶ್ವಾಸವನ್ನ ಹಿಡಿದುಕೊಳ್ಳುವಲ್ಲಿ ಯಶಸ್ವಿಯಾದರೆ ನಿಮಗೆ ಕೊರೊನಾ ವೈರಸ್ ಇಲ್ಲ ಎಂದು ಅರ್ಥ ಎಂದು ಮತ್ತೊಂದು ವದಂತಿ ಹರಡಿದೆ. ಆದರೆ ಸೋಂಕಿಲ್ಲದೇ ಇದ್ದರೂ ಸಹ ವೃದ್ಧರಿಗೆ 10 ಸೆಕೆಂಡ್ಗಿಂತ ಹೆಚ್ಚು ಕಾಲ ಉಸಿರು ಹಿಡಿಯೋಕೆ ಸಾಧ್ಯವಾಗೋದಿಲ್ಲ. ಕೊರೊನಾ ಇದೆ ಅಥವಾ ಇಲ್ಲ ಎಂಬುದನ್ನ ಕಂಡುಕೊಳ್ಳಲು ಕೇವಲ ಪ್ರಾಯೋಗಿಕ ಪರೀಕ್ಷೆ ಮಾತ್ರ ಸಹಕಾರಿ.