ದೆಹಲಿ: ದಕ್ಷಿಣ ದೆಹಲಿ ನಗರ ಆಡಳಿತ (SDMC) ನಾಯಿಗಳ ಅಂತ್ಯ ಸಂಸ್ಕಾರಕ್ಕಾಗಿಯೇ ಒಂದು ಸ್ಥಳ ಸಿದ್ಧ ಮಾಡುತ್ತಿದೆ. ಅದರಲ್ಲಿ ಬಾಲ್ ರೋಲಿಂಗ್ ತಂತ್ರಜ್ಞಾನದ ಅಂತ್ಯಸಂಸ್ಕಾರ ಯಂತ್ರವನ್ನೂ ಅಳವಡಿಸಲಾಗುತ್ತಿದೆ.
ದೇಶದಲ್ಲಿ ಮೊದಲ ಬಾರಿಗೆ ಈ ವ್ಯವಸ್ಥೆ ಸಿದ್ಧವಾಗುತ್ತಿದೆ. ಇದು ಪಬ್ಲಿಕ್, ಪ್ರೈವೇಟ್ ಪಾರ್ಟ್ನರ್ಶಿಪ್ (ಪಿಪಿಪಿ) ಮಾದರಿಯಲ್ಲಿ ಜಾರಿಗೆ ಬರುವ ಯೋಜನೆಯಾಗಿದೆ. ಎಸ್.ಡಿ.ಎಂ.ಸಿ. ಅದಕ್ಕೆ ಆಡಳಿತಾತ್ಮಕ ಅನುಮೋದನೆ ನೀಡಿದ್ದು, ಟೆಂಡರ್ ಪ್ರಕ್ರಿಯೆ ನಡೆಯಬೇಕಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
700 ಚದರ ಅಡಿ ಜಾಗದಲ್ಲಿ 2 ಯಂತ್ರ ಅಳವಡಿಸಲಾಗುತ್ತಿದೆ. ಒಂದರಲ್ಲಿ 100 ಕೆಜಿಗಿಂತ ಕಡಿಮೆ ಭಾರದ ಪ್ರಾಣಿಗಳಿಗಾಗಿ ಒಂದು, ಇನ್ನೊಂದು ಅದಕ್ಕಿಂತ ಹೆಚ್ಚಿನ ಭಾರದ ಪ್ರಾಣಿಗಳಿಗಾಗಿ ಎಂದು ಇಡಲಾಗುತ್ತಿದೆ. ಅಂತ್ಯ ಸಂಸ್ಕಾರದ ನಂತರ 15 ದಿನಗಳವರೆಗೆ ಅವುಗಳ ಭಸ್ಮವನ್ನು ಸಂಗ್ರಹಿಸಿಡುವ ವ್ಯವಸ್ಥೆಯನ್ನೂ ಮಾಡಲಾಗಿದೆ. 30 ಕೆಜಿಗಿಂತ ಕಡಿಮೆ ತೂಕದ ಪ್ರಾಣಿಗೆ 2ಸಾವಿರ ರೂ. ಹೆಚ್ಚಿನ ತೂಕದ ನಾಯಿಗಳಿಗೆ 3 ಸಾವಿರ ರೂ ಶುಲ್ಕ ಪಡೆಯಲು ನಿರ್ಧರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
“ಸಾಕು ಪ್ರಾಣಿಗಳ ಜತೆ ಜನ ಹೆಚ್ಚು ಬಾಂದವ್ಯ ಹೊಂದಿರುತ್ತಾರೆ. ಅವುಗಳು ಮೃತಪಟ್ಟ ನಂತರ ಗೌರವಯುತವಾಗಿ ಅಂತ್ಯಸಂಸ್ಕಾರ ಮಾಡಬೇಕು ಎಂದು ಬಯಸುತ್ತಾರೆ. ಕೆಲವರು ಚಿತಾ ಭಸ್ಮವನ್ನು ನದಿಗೆ ಬಿಡುವವರೂ ಇದ್ದಾರೆ. ಈ ಹಿನ್ನೆಲೆಯಲ್ಲಿ ಇಲ್ಲಿ ನಾಯಿ ಮಾತ್ರವಲ್ಲ ಬೆಕ್ಕುಗಳ ಅಂತ್ಯ ಸಂಸ್ಕಾರಕ್ಕೂ ವ್ಯವಸ್ಥೆ ಮಾಡಿಕೊಡಲಾಗುತ್ತದೆ” ಎನ್ನುತ್ತಾರೆ ಎಸ್.ಡಿ.ಎಂ.ಸಿ. ಅಧಿಕಾರಿಗಳು.