ನಾಗರಿಕ ಸಮಾಜ ತಲೆತಗ್ಗಿಸುವ ಘಟನೆಯೊಂದರಲ್ಲಿ, ತಣ್ಣಗಿರುವ ಚಪಾತಿ ಕೊಟ್ಟರು ಎಂಬ ಕ್ಷುಲ್ಲಕ ಕಾರಣಕ್ಕೆ ರಸ್ತೆ ಬದಿಯ ಢಾಬಾ ಮಾಲೀಕರಿಗೆ ಶೂಟ್ ಮಾಡಿದ ಘಟನೆಯೊಂದು ಉತ್ತರ ಪ್ರದೇಶದಲ್ಲಿ ಜರುಗಿದೆ.
ಸಂತ್ರಸ್ತ ಅವದೇಶ್ ಯಾದವ್ ಪೊಲೀಸರಿಗೆ ದೂರಿನಲ್ಲಿ ತಿಳಿಸಿರುವಂತೆ, ಉ.ಪ್ರ.ದ ಏಟಾ ಬಸ್ ನಿಲ್ದಾಣದ ಬಳಿಯ ರಸ್ತೆ ಬದಿಯಲ್ಲಿರುವ ತಮ್ಮ ಢಾಬಾಗೆ ಬಂದ ಇಬ್ಬರು ಯುವಕರು ಆಹಾರವನ್ನು ಆರ್ಡರ್ ಮಾಡಿದ್ದಾರೆ. ತಮಗೆ ಕೊಟ್ಟ ಚಪಾತಿ ತಣ್ಣಗಿದೆ ಎಂದು ದೂರಿದ ಈ ಇಬ್ಬರು ಯುವಕರು ಢಾಬಾ ಮಾಲೀಕನೊಂದಿಗೆ ವಾಗ್ವಾದಕ್ಕೆ ಇಳಿದಿದ್ದಾರೆ.
ಈ ಜಗಳ ಘರ್ಷಣೆಯ ಮಟ್ಟ ತಲುಪಿದ್ದು, ಆ ಯುವಕರಲ್ಲಿ ಒಬ್ಬ ಪಿಸ್ತೂಲ್ ತೆಗೆದು ಢಾಬಾ ಮಾಲೀಕನ ಕಾಲಿಗೆ ಗುಂಡು ಹಾರಿಸಿದ್ದಾನೆ. ಮಾಲೀಕರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಿ ತೊಡೆಯ ಭಾಗದಲ್ಲಿ ಸಿಲುಕಿದ್ದ ಗುಂಡನ್ನು ತೆರೆಯಲಾಗಿದ್ದು ಆತ ಈಗ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಈ ಸಂಬಂಧ ಅಮಿತ್ ಚೌಹಾಣ್ ಹಾಗೂ ಕೌಸ್ತುಭ್ ಮಿಶ್ರಾ ಎಂಬ ಇಬ್ಬರು ಆಪಾದಿತರನ್ನು ಪೊಲೀಸರು ಬಂಧಿಸಿದ್ದು, ಎಫ್‌ಐಆರ್ ದಾಖಲಿಸಿದ್ದಾರೆ.