ವಿಮಾನ ಪ್ರಯಾಣ ಬೆಳೆಸುವ ಸಿದ್ಧತೆಯಲ್ಲಿದ್ದರೆ ಕೊರೊನಾ ಸಂದರ್ಭದಲ್ಲಿ ಜಾರಿಯಲ್ಲಿರುವ ಕೆಲವು ನಿಯಮಗಳ ಬಗ್ಗೆ ತಿಳಿದಿರುವ ಅಗತ್ಯವಿದೆ. ಒಂದು ವೇಳೆ ನೀವು ನಿಯಮ ಮೀರಿದ್ರೆ ವಿಮಾನದಿಂದ ಕೆಳಗಿಳಿಯಬೇಕಾಗುತ್ತದೆ. ಕೊರೊನಾ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಡಿಜಿಸಿಎ ವಿಮಾನದಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ಹೊಸ ನಿಯಮಗಳನ್ನು ಜಾರಿಗೊಳಿಸಿದೆ. ವಿಮಾನ ಟಿಕೆಟ್‌ಗಳನ್ನು ಕಾಯ್ದಿರಿಸುವ ಜೊತೆಗೆ ಕೋವಿಡ್ ಪ್ರೋಟೋಕಾಲ್‌ನ ಇ-ನಕಲನ್ನು ವಿಮಾನಯಾನ ಸಂಸ್ಥೆಗಳು ಪ್ರಯಾಣಿಕರಿಗೆ ಕಳುಹಿಸುತ್ತವೆ. ಅವುಗಳನ್ನು ಕಟ್ಟುನಿಟ್ಟಾಗಿ ಅನುಸರಿಸಬೇಕು.
ಮಾರ್ಚ್ 13 ರಂದು ನಾಗರಿಕ ವಿಮಾನಯಾನ ಮಹಾನಿರ್ದೇಶಕರು ಈ ಆದೇಶವನ್ನು ಎಲ್ಲಾ ವಿಮಾನಯಾನ ಸಂಸ್ಥೆಗಳಿಗೆ ರವಾನಿಸಿದ್ದಾರೆ. ವಿಮಾನ ಆಗಮನ, ನಿರ್ಗಮನ ಮತ್ತು ಪ್ರಯಾಣದ ಸಮಯದಲ್ಲಿ ವಿಮಾನಯಾನ ಸಂಸ್ಥೆ ಕಳುಹಿಸುವ ಕೋವಿಡ್ ಪ್ರೋಟೋಕಾಲ್ ನ್ನು ಪ್ರಯಾಣಿಕರು ಅನುಸರಿಸಬೇಕಾಗುತ್ತದೆ. ವಿಮಾನದೊಳಗೆ ಯಾವುದೇ ಅಜಾಗರೂಕತೆ ಕಂಡುಬಂದಲ್ಲಿ ಅಥವಾ ಮುಖವಾಡವನ್ನು ಸರಿಯಾಗಿ ಧರಿಸದಿದ್ದರೆ, ಕೊರೊನಾದದ ಇತರ ಮಾರ್ಗಸೂಚಿಗಳನ್ನು ಅನುಸರಿಸದಿದ್ದರೆ ಅವರನ್ನು ವಿಮಾನದಿಂದ ಕೆಳಗಿಳಿಸಲಾಗುವುದು.
ಎಲ್ಲ ಸಮಯದಲ್ಲಿಯೂ ಮಾಸ್ಕ್ ಕಡ್ಡಾಯವಾಗಲಿದೆ. ಮೂಗು ಹಾಗೂ ಬಾಯಿ ಮುಚ್ಚುವಂತೆ ಮಾಸ್ಕ್ ಧರಿಸಿರಬೇಕು. ಇದನ್ನು ಪರಿಶೀಲಿಸಲು ಸಿಬ್ಬಂದಿ ನಿಯೋಜನೆ ಮಾಡಲಾಗುವುದು. ನಿಯಮ ಉಲ್ಲಂಘಿಸಿದ ಪ್ರಯಾಣಿಕರನ್ನು ಅಶಿಸ್ತಿನ ಪ್ರಯಾಣಿಕರೆಂದು ಪರಿಗಣಿಸಲಾಗುವುದು.