ಕೊರೊನಾ ಸೋಂಕಿಗೆ ಒಮ್ಮೆ ಒಳಗಾದ್ವಿ ಅಂದರೆ ಸಾಕು ಕುಟುಂಬಸ್ಥರಿಂದ ದೂರಾಗಬೇಕಾಗುತ್ತೆ. ಹೇಗೋ ಹೋರಾಟ ಮಾಡಿ ಕೊರೊನಾದಿಂದ ಗೆದ್ದು ಬಂದರೆ ಅಡ್ಡಿಲ್ಲ. ಆದರೆ ಒಂದು ವೇಳೆ ಕೊರೊನಾದಿಂದ ಪ್ರಾಣವೇ ಹೋಯ್ತು ಅಂದರೆ ಅಂತ್ಯಕ್ರಿಯೆ ಮಾಡೋದು ಸುಲಭದ ಕೆಲಸವಂತೂ ಅಲ್ಲವೇ ಅಲ್ಲ. ಎಷ್ಟೋ ಕುಟುಂಬಸ್ಥರಿಗೆ ಮೃತ ವ್ಯಕ್ತಿಯ ಮುಖ ನೋಡೋಕೂ ಅವಕಾಶ ಸಿಗದೇ ಹೋದ ಉದಾಹರಣೆಯೂ ಇದೆ. ಮೃತದೇಹ ಸಿಕ್ಕರೆ ಅದರ ಅಂತ್ಯಕ್ರಿಯೆ ಮಾಡಲು ಜಾಗ ಸಿಗದೇ ಪರದಾಡುವ ಸ್ಥಿತಿಯೂ ಇದೆ.
ಸೂರತ್ನಲ್ಲೂ ಇಂತಹದ್ದೇ ಒಂದು ಅಮಾನವೀಯ ಘಟನೆ ನಡೆದಿದೆ. ಒಲ್ಪಾಡ್ ಗ್ರಾಮದಲ್ಲಿ ಕೊರೊನಾದಿಂದ ಸಾವನ್ನಪ್ಪಿದ್ದ 60 ವರ್ಷದ ಮಹಿಳೆಯ ಶವವನ್ನ ಸಾಗಿಸೋಕೆ ವಾಹನ ಸಿಗದ ಕಾರಣ ಆಕೆಯ ಪುತ್ರ ತಳ್ಳು ಗಾಡಿಯ ಮೇಲೆ ತಾಯಿಯ ಶವ ಸಾಗಿಸಿದ ಹೃದಯ ವಿದ್ರಾವಕ ಘಟನೆ ನಡೆದಿದೆ. ಪಂಚಾಯತ್ ಸಿಬ್ಬಂದಿ ಮೃತರ ಕುಟುಂಬಸ್ಥರಿಗೆ ಸಹಾಯ ಮಾಡದ ಕಾರಣ ಕುಟುಂಬಸ್ಥರು ಇನ್ನಿಲ್ಲದ ಪಾಡನ್ನ ಪಟ್ಟಿದ್ದಾರೆ.
27 ವರ್ಷದ ಪರಿನ್ ಷಾ ಎಂಬವರ ತಾಯಿ ಕೋವಿಡ್ 19ಗೆ ಬಲಿಯಾಗಿದ್ದರಿಂದ ಪಂಚಾಯತ್ ಸದಸ್ಯರು ಅಂತ್ಯಕ್ರಿಯೆಗೆ ಯಾವುದೇ ಸಹಾಯ ಮಾಡಲು ನಿರಾಕರಿಸಿದ್ದಾರೆ. ಕೋವಿಡ್ 19 ಮೃತರಿಗೆ ಈ ಗ್ರಾಮದಲ್ಲಿ ಸ್ಮಶಾನದ ಜಾಗವನ್ನೂ ನೀಡಲೂ ಗ್ರಾಮಸ್ಥರು ನಿರಾಕರಿಸಿದ್ದಾರೆ. ಸುದೀರ್ಘ ಹೋರಾಟದ ಬಳಿಕ ಮೃತರ ಕುಟುಂಬಕ್ಕೆ ಸ್ಮಶಾನದಲ್ಲಿ ಜಾಗ ಸಿಕ್ಕಿದೆ.
ಮೃತ ತಾಯಿಯ ಶವವನ್ನ ತಳ್ಳು ಗಾಡಿಯ ಮೇಲೆ ಪುತ್ರ ಸಾಗಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದ ವಿವಿಧ ವೇದಿಕೆಗಳಲ್ಲಿ ಶೇರ್ ಮಾಡಲಾಗ್ತಿದೆ. ಕೊರೊನಾ ಸೋಂಕಿತೆಯಾಗಿದ್ದ ಪರಿನ್ ಷಾ ತಾಯಿ ಸಾಯಂಕಾಲ 7 ಗಂಟೆ ಸುಮಾರಿಗೆ ನಿಧನರಾಗಿದ್ದರು. ಕೂಡಲೇ ಅಂತ್ಯಕ್ರಿಯೆ ಮಾಡಬೇಕು ಎಂದು ಅವರಿಗೆ ಸೂಚನೆ ನೀಡಲಾಗಿತ್ತು. ಆದರೆ ಮೂರು ಗಂಟೆಗಳ ಕಾಲ ಕಾದರೂ ಶಾಗೆ ಒಂದು ವ್ಯಾನ್ ವ್ಯವಸ್ಥೆ ಮಾಡಲು ಆಗಲಿಲ್ಲ. ಇದರಿಂದ ಬೇಸತ್ತ ಶಾ ತಮ್ಮ ತಾಯಿಯ ಶವವನ್ನ ತಳ್ಳು ಗಾಡಿಯ ಮೇಲೆ ಸಾಗಿಸಿದ್ದಾರೆ.