ನವದೆಹಲಿ: ತಮ್ಮ ಪಾಲಕರಿಂದಲೇ ಸಂಕಷ್ಟಕ್ಕೆ ಸಿಲುಕಿದ್ದ ಬಿಹಾರದ ಯುವತಿಯನ್ನು ದೆಹಲಿ ಮಹಿಳಾ ಆಯೋಗವು ತಮ್ಮ ಭೌಗೋಳಿಕ ವ್ಯಾಪ್ತಿ ಮೀರಿ ಕಾರ್ಯನಿರ್ವಹಣೆ ಮಾಡುವ ಮೂಲಕ ರಕ್ಷಿಸಿದೆ.
ದೆಹಲಿಯಲ್ಲಿ ಸುಶೀಲಾ(ಹೆಸರು ಬದಲಿಸಲಾಗಿದೆ) ಹಾಗೂ ಅನ್ಯ ಧರ್ಮೀಯ ಯುವಕ ಲೀವ್ ಇನ್ ರಿಲೇಶನ್ ನಲ್ಲಿದ್ದರು. ಅದರ ಮಾಹಿತಿ ಪಡೆದ ಆಕೆ ಪಾಲಕರು ಪ್ರಿಯತಮನ ಮೇಲೆ ಹಲ್ಲೆ ನಡೆಸಿ, ಆಕೆಯನ್ನು ಎತ್ತಿಕೊಂಡು ಹೋಗಿ ಬಂಧನದಲ್ಲಿರಿಸಿದ್ದರು. ಆಕೆ ಎಲ್ಲಿದ್ದಾಳೆ ಎಂಬ ಮಾಹಿತಿಯೂ ಪ್ರಿಯತಮನಿಗೆ ತಿಳಿದಿರಲಿಲ್ಲ. ಆಕೆಯ ಮೊಬೈಲ್ ಸ್ವಿಚಾಫ್ ಆಗಿತ್ತು.
ಪ್ರಿಯತಮ ಆಗಮಿಸಿ ದೆಹಲಿ ಮಹಿಳಾ ಆಯೋಗದ ಡಿಜಿಪಿ ಅವರಿಗೆ ದೂರು ನೀಡಿ ರಕ್ಷಣೆಗೆ ಮನವಿ ಮಾಡಿದ್ದ. ತನಗೆ ಹಾಗೂ ತನ್ನ ಪ್ರಿಯತಮೆಯ ಜೀವಕ್ಕೆ ಆಕೆಯ ಪಾಲಕರಿಂದ ಹಾಗೂ ಧಾರ್ಮಿಕ ಸಂಘಟನೆಯಿಂದ ಬೆದರಿಕೆ ಇದೆ ಎಂದು ದೂರಿದ್ದ. ಆಯೋಗ ಬಿಹಾರ ಪೊಲೀಸರಿಗೆ ಮಾಹಿತಿ ನೀಡಿ ಯುವತಿಯನ್ನು ರಕ್ಷಿಸುವಂತೆ ಸೂಚಿಸಿತ್ತು.
ಬಿಹಾರ ಪೊಲೀಸರು ಯುವತಿಯನ್ನು ರಾಜ್ಯದ ಪಾಂಡುಲಾ ಎಂಬಲ್ಲಿ ಪತ್ತೆ ಹಚ್ಚಿ ದೆಹಲಿ ಮಹಿಳಾ ಆಯೋಗಕ್ಕೆ ಒಪ್ಪಿಸಿದೆ. ದೆಹಲಿ ಮಹಿಳಾ ಆಯೋಗ ಇಬ್ಬರನ್ನೂ ಒಂದು ಮಾಡಿದೆ. “ಇದು ನಮ್ಮ ವ್ಯಾಪ್ತಿಗೆ ಬಾರದು. ಆದರೆ, ಮಾನವೀಯತೆಯ ದೃಷ್ಟಿಯಿಂದ ಈ ಕಾರ್ಯ ಮಾಡಿದ್ದೇವೆ” ಎಂದು ಮಹಿಳಾ ಆಯೋಗ ಮುಖ್ಯಸ್ಥೆ ಸ್ವಾತಿ ಮಾಲಿವಾಲ್ ತಿಳಿಸಿದ್ದಾರೆ.