ದೆಹಲಿಯ ಮಹಿಳೆಯೊಬ್ಬಳು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಯುಕೆ ಪ್ರಧಾನಿಗೆ ಸಂದೇಶ ಕಳಿಸಿದ್ದ ವಿಚಿತ್ರ ಪ್ರಸಂಗವೊಂದು ನಡೆದಿದೆ.
ತಕ್ಷಣವೇ ಕಾರ್ಯಪ್ರವೃತ್ತರಾದ ಯುಕೆ ಪ್ರಧಾನಿ ಕಚೇರಿಯು ಲಂಡನ್ ನಲ್ಲಿರುವ ಭಾರತದ ರಾಯಭಾರ ಕಚೇರಿಗೆ ಸಂದೇಶ ಕಳಿಸಿ ಆ ಮಹಿಳೆಯನ್ನು ರಕ್ಷಿಸಲು ಅಗತ್ಯ ಕ್ರಮ ವಹಿಸುವಂತೆಯೂ ಕೋರಿತು.
ಕೂಡಲೇ ಕಾರ್ಯಪ್ರವೃತ್ತರಾದ ದೆಹಲಿ ರೋಹಿಣಿ ಪ್ರದೇಶದ ಅಮಾನ್ ವಿಹಾರ ಪೊಲೀಸರು ಆಕೆಯ ಮನೆಯನ್ನು ಹುಡುಕಲು ಹರಸಾಹಸ ಪಟ್ಟು ಕೊನೆಗೂ ಮಹಿಳೆಯನ್ನು ರಕ್ಷಿಸಿದ್ದಾರೆ.
ವೈವಾಹಿಕ ಸಂಬಂಧದಲ್ಲಿ ಬಿರುಕುಂಟಾದ ಹಿನ್ನೆಲೆಯಲ್ಲಿ ಆಕೆ ಮಾನಸಿಕೆ ಅಸ್ವಸ್ಥಳಾಗಿದ್ದಳೆಂದು ತಿಳಿದುಬಂದಿದೆ. ಮುಂದಿನ ಎರಡು ಗಂಟೆಯಲ್ಲಿ ನನಗೆ ಸಹಾಯ ದೊರಕದೆ ಹೋದಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಆಕೆ ಯುಕೆ ಪ್ರಧಾನಿ ಬೋರಿಸ್ ಜಾನ್ಸನ್ ಗೆ ಇ ಮೇಲ್ ಮಾಡಿದ್ದಳು.
ಇ ಮೇಲ್ ನಲ್ಲಿ ಆಕೆ ತನ್ನ ವಿಳಾಸವನ್ನು ಪೂರ್ಣವಾಗಿ ಬಹಿರಂಗಪಡಿಸಿರಲಿಲ್ಲ. ಹೀಗಾಗಿ ಪೊಲೀಸರು ವಿಳಾಸ ಪತ್ತೆ ಹಚ್ಚಲು ಒಂದಷ್ಟು ಶ್ರಮ ವಹಿಸಬೇಕಾಗಿತ್ತು. ಬೆಳಗಿನ ಜಾವ 1ಗಂಟೆಗೆ ಕಾರ್ಯಾಚರಣೆ ಆರಂಭವಾಗಿ ಸತತ ಎರಡು ತಾಸಿನ ಬಳಿಕ ಆಕೆಯ ಮನೆಯನ್ನು ಹುಡುಕಲಾಯಿತು. ಆರಂಭದಲ್ಲಿ ಮನೆ ಬಾಗಿಲು ತೆರೆಯಲು ಮಹಿಳೆ ಹಿಂದೇಟು ಹಾಕಿದರು.
ಮನೆ ಬಾಗಿಲನ್ನು ಹೊಡೆಯುವ ಉದ್ದೇಶದಿಂದ ಅಗ್ನಿಶಾಮಕ ದಳಕ್ಕೆ ಪೊಲೀಸರು ಸಂದೇಶ ಕಳಿಸಿದರು. ಅವರು ಸಹ ಆಗಮಿಸಿ ಬಾಗಿಲನ್ನು ತೆರೆಯಲು ಪ್ರಯತ್ನಿಸಿದಾಗ ಮಹಿಳೆ ಹೊರಬಂದು, ಪೊಲೀಸ್ ಸಿಬ್ಬಂದಿಯನ್ನು ಹೊರಹೋಗುವಂತೆ ಒತ್ತಾಯಿಸಿದ್ದಾಳೆ. ತೀವ್ರ ಒತ್ತಡಕ್ಕೆ ಒಳಗಾಗಿದ್ದ ಆಕೆ ಕೋರಿಕೆಯಂತೆ ಎಲ್ಲರೂ ದೂರ ಸರಿದು ನಿಂತರು.
ಮನೆಯಲ್ಲಿ 16ಕ್ಕೂ ಹೆಚ್ಚು ಬೆಕ್ಕುಗಳು ಕಂಡುಬಂದಿದ್ದು ಮನೆ ಗಬ್ಬುನಾರುತ್ತಿತ್ತು, ಸ್ವತಃ ಆಕೆ ದುರ್ವಾಸನೆ ಬರುತ್ತಿದ್ದಳು, ಪಕ್ಕದಲ್ಲಿ ನಿಲ್ಲುವುದು ಅಸಾಧ್ಯವಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.