
ಕೋವಿಡ್ 19ನಿಂದಾಗಿ ಬಹುತೇಕರ ಬಾಳು ಬೀದಿಗೆ ಬಂದಿದೆ. ಇಂತಹ ಎಷ್ಟೋ ಜನರಿಗೆ ಸೋಶಿಯಲ್ ಮೀಡಿಯಾದ ಮೂಲಕ ನೆರವು ಸಿಕ್ಕಿರೋದನ್ನೂ ನಾವು ಕಂಡಿದ್ದೇವೆ.
ಇದೀಗ ಈ ಸಾಲಿಗೆ ಇನ್ನೊಂದು ಉದಾಹರಣೆ ಸೇರಿದೆ. ದೆಹಲಿಯ ಪತ್ರಕರ್ತೆ ಸೋನಲ್ ಕಲ್ರಾ ಎಂಬವರು ತಮ್ಮ ಮನೆಯ ಬಳಿಯಲ್ಲಿ ಕೊಳಲನ್ನ ವ್ಯಾಪಾರ ಮಾಡುವ ವ್ಯಕ್ತಿಯ ಫೋಟೋವನ್ನ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ.
ಕಳೆದ ಮೂರು ದಿನಗಳಿಂದ ಪತ್ರಕರ್ತೆ ವಾಸಿಸುವ ಬೀದಿಯಲ್ಲೇ ಕೊಳಲನ್ನ ವ್ಯಾಪಾರ ಮಾಡ್ತಿರುವ ಈತನ ಕೊಳಲು ನುಡಿಸುವ ಪರಿ ಕಂಡು ಇಲ್ಲಿನ ಜನರು ಬೆಕ್ಕಸಬೆರಗಾಗಿದ್ದಾರೆ.
ಕೆಲಸದ ಜಂಜಾಟದ ನಡುವೆ ಬ್ಯುಸಿ ಇರುವ ನಡುವೆಯೂ ನಾನು ಈ ವ್ಯಕ್ತಿಯನ್ನ ನಮ್ಮ ಮನೆಯ ಬಾಲ್ಕನಿಯ ಮುಂದೆ ನಿಂತು ಕಳೆದ ಮೂರು ವಾರಗಳಿಂದ ಗಮನಿಸುತ್ತಿದ್ದೇನೆ. ಇಂದು ಈತ ಬರಲಿಲ್ಲ. ನಮಗೆ ನಮ್ಮ ಬೀದಿಯೇ ಒಂದು ರೀತಿ ಖಾಲಿಯಾಗಿದೆ ಎಂಬಂತೆ ಭಾಸವಾಗ್ತಿದೆ. ಮಾಸ್ಕ್ನ ಕೆಳಗೆ ಹಾಕಿ ಈತ ಕೊಳಲನ್ನ ನುಡಿಸುತ್ತಾ ಇರ್ತಿದ್ದ. ಆತನ ಕೊಳಲು ನುಡಿಸುವ ಪರಿಯಲ್ಲಿ ಜಾದೂ ಇತ್ತು. ನಾನು ಒಂದು ಕೊಳಲನ್ನ ಖರೀದಿ ಮಾಡಿದ್ದೇನೆ. ಇದು ಇಡೀ ತಿಂಗಳಲ್ಲೇ ನಾನು ಅತ್ಯಂತ ಖುಷಿಪಟ್ಟ ದಿನವಾಗಿದೆ ಎಂದು ಶೀರ್ಷಿಕೆಯಲ್ಲಿ ಬರೆಯಲಾಗಿದೆ.
ಸುಂದರ ಸಂಗೀತದ ಜೊತೆಯಲ್ಲಿ ನೋವು ಇದೆ. ಈ ರೀತಿ ಸಣ್ಣ ಉದ್ಯಮವನ್ನ ಹೊಂದಿರುವವರಿಗೆ ತುಂಬಾನೇ ಕಷ್ಟವಾಗ್ತಿದೆ. ಇವರಿಗೆ ಬದುಕಲು ಈ ಸಣ್ಣ ಉದ್ಯಮದ ಹೊರತು ಬೇರೇನು ಇಲ್ಲ. ಹೀಗಾಗಿ ಇವರಿಗೆ ಸಹಾಯದ ಅವಶ್ಯಕತೆ ಇದೆ ಎಂದು ಹೇಳಿಕೊಂಡಿದ್ದಾರೆ. ಪತ್ರಕರ್ತೆಯ ಈ ಪೋಸ್ಟ್ಗೆ ವ್ಯಾಪಕ ಪ್ರತಿಕ್ರಿಯೆ ವ್ಯಕ್ತವಾಗಿದೆ.