ದೇಶದಲ್ಲಿ ಕೊರೊನಾ ಎರಡನೇ ಅಲೆ ಮಿತಿಮೀರಿದೆ. ಸಾಕಷ್ಟು ಮುಂಜಾಗ್ರತಾ ಕ್ರಮ ಹಾಗೂ ಲಸಿಕೆ ಅಭಿಯಾನಗಳ ಬಳಿಕವೂ ದೇಶದಲ್ಲಿ ಸೋಂಕಿನ ಪ್ರಮಾಣ ನಿಯಂತ್ರಣಕ್ಕೆ ಬರ್ತಿಲ್ಲ . ದೇಶದಲ್ಲಿ ಅದರಲ್ಲೂ ರಾಜಧಾನಿ ದೆಹಲಿಯಲ್ಲಿ ಸೋಂಕು ಮಿತಿಮೀರಿ ಹೆಚ್ಚಳವಾಗ್ತಿರೋದ್ರ ಹಿಂದಿನ ಕಾರಣವನ್ನ ಏಮ್ಸ್ ನಿರ್ದೇಶಕ ಬಿಚ್ಚಿಟ್ಟಿದ್ದಾರೆ.
ಮೂಲ ವೈರಸ್ಗಿಂತ ಹೆಚ್ಚು ಭಯಾನಕವಾಗಿರುವ ರೂಪಾಂತರಿತ ವೈರಸ್ ರಾಜಧಾನಿಯಲ್ಲಿ ತ್ವರಿತಗತಿಯಲ್ಲಿ ಸೋಂಕು ಹೆಚ್ಚಳಕ್ಕೆ ಕಾರಣವಾಗಿದೆ ಎಂಬ ಆಘಾತಕಾರಿ ಮಾಹಿತಿಯನ್ನ ಏಮ್ಸ್ ನಿರ್ದೇಶಕ ಡಾ. ರಂದೀಪ್ ಗುಲೇರಿಯಾ ಹೇಳಿದ್ದಾರೆ.
ಈ ಸಂದರ್ಭದಲ್ಲಿ ಮೂಲ ರೋಗಿಯು ಹೆಚ್ಚಿನ ಪ್ರಮಾಣದಲ್ಲಿ ಸೋಂಕನ್ನ ಹರಡುತ್ತಿದ್ದಾನೆ ಎಂಬ ಅಂಶವನ್ನ ನಾವು ಗಮನಿಸಿದ್ದೇವೆ. ಮೊದಲೆಲ್ಲ ಒಬ್ಬ ರೋಗಿ ತನ್ನ ಸಂಪರ್ಕದಲ್ಲಿದ್ದ 30-40 ಪ್ರತಿಶತ ಜನರಿಗೆ ಸೋಂಕನ್ನ ಹರಡುತ್ತಿದ್ದ. ಆದರೆ ಇದೀಗ ಈ ಪ್ರಮಾಣ 80 – 90 ಪ್ರತಿಶತಕ್ಕೆ ಏರಿಕೆ ಕಂಡಿದೆ. ಅನೇಕ ಕೇಸ್ಗಳಲ್ಲಿ ಸಂಪೂರ್ಣ ಕುಟುಂಬವೇ ಕೊರೊನಾ ಸೋಂಕಿಗೆ ಒಳಗಾಗಿದ್ದನ್ನೂ ನಾವು ಕಂಡಿದ್ದೇವೆ ಎಂದು ಗುಲೇರಿಯಾ ಹೇಳಿದ್ದಾರೆ.
ಬ್ರಿಟನ್, ದಕ್ಷಿಣ ಆಫ್ರಿಕಾ ಹಾಗೂ ಬ್ರೆಜಿಲ್ಗಳಲ್ಲಿ ಕೊರೊನಾ ವೈರಸ್ ರೂಪಾಂತರಗೊಂಡಿದೆ. ರಾಜಧಾನಿ ದೆಹಲಿಯಲ್ಲಿ ಬ್ರಿಟನ್ ಹಾಗೂ ದಕ್ಷಿಣ ಆಫ್ರಿಕಾ ರೂಪಾಂತರಿತ ವೈರಸ್ ಬೆಳಕಿಗೆ ಬಂದಿದೆ. ಬ್ರಿಟನ್ ರೂಪಾಂತರಿ ವೈರಸ್ ಪಂಜಾಬ್ನಲ್ಲೂ ಕಂಡು ಬಂದಿದೆ.
ಏಮ್ಸ್ ನಿರ್ದೇಶಕ ಗುಲೇರಿಯಾ ರಾಷ್ಟ್ರೀಯ ಕೋವಿಡ್ 19 ಮ್ಯಾನೇಜ್ಮೆಂಟ್ ಟಾಸ್ಕ್ನ ಸದಸ್ಯರಿದ್ದಾರೆ. ಈ ರೂಪಾಂತರಿ ವೈರಸ್ ವಿರುದ್ಧ ಹೋರಾಡೋದಕ್ಕಾಗಿ ಮಾಸ್ಕ್ ಬಳಕೆ , ಸಾಮಾಜಿಕ ಅಂತರ ಹಾಗೂ ಆಗಾಗ ಕೈ ತೊಳೆಯೋದನ್ನ ಮರೆಯದಿರಿ ಎಂದು ಹೇಳಿದ್ದಾರೆ.